ಹುಬ್ಬಳ್ಳಿ: ನಾನು ಕಾಂಗ್ರೆಸ್ಸಿಗೆ ಹೋಗುತ್ತೇನೆ ಎಂಬ ಸುದ್ದಿ ಹಬ್ಬಿತ್ತು. ಆದರೆ ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ. ಬಿಜೆಪಿಯಲ್ಲೇ ಮುಂದುವರಿಯುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟಪಡಿಸಿದರು. ಇದರಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬಿಜೆಪಿಗೆ ಮರಳಿದ ಬೆನ್ನಲ್ಲೇ ಮುನೇನಕೊಪ್ಪ ತಮ್ಮ ಬಗ್ಗೆ ಇದ್ದ ಊಹಾಪೋಹಗಳಿಗೆ ಬ್ರೇಕ್ ಹಾಕಿದಂತಾಗಿದೆ. ಪತ್ರಿಕಾಗೋಷ್ಠಿ ಈ ಮಾತು ಸ್ಪಷ್ಟಪಡಿಸಿದ ಅವರು, ನನ್ನ ಮನೆಯಲ್ಲಿ ನಡೆದ ಕೆಲ ಕಹಿ ಘಟನೆಗಳಿಂದ ರಾಜಕೀಯದಿಂದ ದೂರ ಉಳಿದು ಐದು ತಿಂಗಳಿನಿಂದ ಮೌನಕ್ಕೆ ಜಾರಿದ್ದೆ ಅಷ್ಟೇ ಎಂದರು.
ರಾಜಕೀಯದಲ್ಲಿ ಸಕ್ರಿಯವಾಗಿಲ್ಲದ ಕಾರಣ ನನ್ನ ಬಗ್ಗೆ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಮುನೇನಕೊಪ್ಪ ಕಾಂಗ್ರೆಸ್ ಸೇರುತ್ತಾರೆ, ಮುನೇನಕೊಪ್ಪ ಕಾಂಗ್ರೆಸ್ನಿಂದ ಲೋಕಸಭೆ ಅಭ್ಯರ್ಥಿ ಆಗುತ್ತಾರೆ. ಈ ಎಲ್ಲ ಉಹಾಪೋಹಗಳಿಗೆ ಪುಷ್ಟಿನೀಡುವಂತೆ ಕಾಂಗ್ರೆಸ್ ನಾಯಕರು ನನಗೆ ಆಹ್ವಾನ ನೀಡಿದ್ದರು. ಆದರೆ, ನಾನಾಗಿಯೇ ಯಾರ ಮನೆಗೂ ಹೋಗಿರಲಿಲ್ಲ.
ಆಹ್ವಾನ ನೀಡಿದ ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಎಂದರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಪಕ್ಷದಲ್ಲಿ ನೋವಾಗಿದ್ದರಿಂದ ಕಾಂಗ್ರೆಸ್ ಸೇರಿದ್ದರು. ಅವರು ಮತ್ತೆ ಪಕ್ಷಕ್ಕೆ ವಾಪಸ್ ಬಂದಿದ್ದರಿಂದ ಪಕ್ಷಕ್ಕೆ ಹಾಗೂ ನಮಗೆ ದೊಡ್ಡ ಶಕ್ತಿ ಬಂದಂತಾಗಿದೆ. ಪಕ್ಷ ಬಿಟ್ಟು ಹೋದವರನ್ನು ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.