ಬೆಂಗಳೂರು: ಡ್ರೈವರ್ ರಹಿತ ಹಳದಿ ಮೆಟ್ರೋ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ತಲುಪಿದೆ. ಹೌದು ಇಂದು ಬೆಳಗ್ಗಿನ ಜಾವ 3:30ರ ಸುಮಾರಿಗೆ 6 ರೈಲಿನ ಕೋಚ್‌ಗಳು ಸುರಕ್ಷಿತವಾಗಿ ಹೆಬ್ಬಗೋಡಿ ಡಿಪೋಗೆ ತಲುಪಿರುವುದಾಗಿ ‘ನಮ್ಮ ಮೆಟ್ರೋ’ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದೆ. ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗಕ್ಕಾಗಿ ಚೀನಾದಿಂದ ಈ ರೈಲಿನ ಬೋಗಿಗಳನ್ನು ತರಿಸಲಾಗಿದೆ. ಟ್ರ‍್ಯಾಕ್‌ನಲ್ಲಿ ಚಲಿಸುವ ಮೊದಲು ಕೆಲವೊಂದು ಪರೀಕ್ಷೆಗಳನ್ನು ನಡೆಸಬೇಕಿದೆ.
ಇದಾದ ಬಳಿಕ ಟ್ರ‍್ಯಾಕ್‌ನಲ್ಲಿ 15 ಪರೀಕ್ಷೆಗಳನ್ನು ಮಾಡಬೇಕಿದೆ. ನಂತರ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆ ಅಗತ್ಯವಿದೆ. ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದ್ದು, ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಹಳದಿ ಮಾರ್ಗ ಪ್ರಮುಖ ಮೆಟ್ರೋ ಕಾರಿಡಾರ್ ಆಗಿದ್ದು, ದಕ್ಷಿಣ ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯೊಂದಿಗೆ ಸಂಪರ್ಕಿಸುತ್ತದೆ.