ಬೆಂಗಳೂರು:- ಇಂದಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅಳಿಯ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರ ಸೇವಾವಧಿ ಮುಗಿಯಲಿದೆ. ಡಾ.ಮಂಜುನಾಥ್ ನಿವೃತ್ತಿ ಆಗುತ್ತಿರುವ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದೆ.
ಈಗಾಗಲೇ 21 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 11 ಅರ್ಜಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಜನವರಿ 31ರಂದೇ ಮುಖ್ಯಮಂತ್ರಿಗಳು 11 ವೈದ್ಯರ ಪೈಕಿ ಒಬ್ಬರನ್ನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಿದ್ದಾರೆ. ಈಗಾಗಲೇ ಮೈಸೂರು ಜಯದೇವ ಆಸ್ಪತ್ರೆಯ ಎಂ.ಎಸ್ ಸದಾನಂದ ಹಾಗೂ ಡಾ. ದಿನೇಶ್ ಹೆಸರು ರೇಸ್ನಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಡಾ.ಸಿ.ಎನ್ ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆ ಜನರ ಆಸ್ಪತ್ರೆಯಾಗಿದೆ. ನಾವು ಪಂಚತಾರಾ ಖಾಸಗಿ ಆಸ್ಪತ್ರೆಯಂತೆ ಮಾಡುವ ಗುರಿ ಇತ್ತು. ಅದು 100 ಕ್ಕೆ100 ಆಗಿದೆ. ಇಲ್ಲಿ ಪ್ರತಿಯೋಬ್ಬರಿಗೂ ಸೇವಾ ಮನೋಭಾವ ಬೆಳಸಲಾಗಿದೆ. ಸರ್ಕಾರದ ಸಹಕಾರ, ದಾನಿಗಳ ಸಹಕಾರದಿಂದ ಇವತ್ತು ಈ ಮಟ್ಟಕ್ಕೆ ಆಸ್ಪತ್ರೆ ಬೆಳೆದಿದೆ. ನಾನು ಇಲ್ಲಿಗೆ ಬಂದಾಗ 300 ಹಾಸಿಗೆ ಇತ್ತು, ಈಗ 2,000 ಸಾವಿರ ಹಾಸಿಗೆಗಳಿವೆ. 3,500 ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. 16 ವರ್ಷಗಳಲ್ಲಿ 75 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇನೆ. 8 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಇಷ್ಟು ವರ್ಷಗಳ ಸೇವೆ ಸಂತೋಷ ತಂದಿದೆ ತಮ್ಮ ನೆನಪುಗಳನ್ನ ಹಂಚಿಕೊಂಡಿದ್ದಾರೆ.
ಜಯದೇವ ಸಾಧನೆಯ ಕೇವಲ ಒಬ್ಬನಿಂದಲ್ಲ, ಅದು ಎಲ್ಲರಿಗೂ ಸಲ್ಲಬೇಕು. 1989ರಲ್ಲಿ ಜಯದೇವ ಆಸ್ಪತ್ರೆ ಸೇರಿದಾಗ ನನಗೊಂದು ಕನಸಿತ್ತು. ಆಗ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ ಇರಲಿಲ್ಲ. 2005ರಲ್ಲಿ ಆಸ್ಪತ್ರೆ ತ್ಯಜಿಸುವ ಮನಸ್ಸು ಮಾಡಿದ್ದೆ. ಆಗ ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನ ಇಲ್ಲಿಯೇ ಕೆಲಸ ಮಾಡುವಂತೆ ಸೂಚಿಸಿದ್ದರು. ದೊಡ್ಡವರ ಮಾತು ಕೇಳಿದ್ರೆ ಒಳ್ಳೆದಾಗುತ್ತೆ ಅನ್ನೊದಕ್ಕೆ ದೇವೇಗೌಡರ ಮಾತು ಸಾಕ್ಷಿ. ಆವತ್ತು ಅವರ ಮಾತು ಕೇಳದೇ ಇದ್ದಿದ್ದರೆ, ನಾನು ವಿದೇಶದಲ್ಲಿರುತ್ತಿದ್ದೆ. ದುಡ್ಡು ಮಾಡ್ತಿದ್ದೆ, ಆದ್ರೆ ಇಷ್ಟು ಪ್ರೀತಿ ಸಿಗುತ್ತಿರಲಿಲ್ಲ. ಸಂಪತ್ತಿಗೆ ಬೆಲೆ ಕಟ್ಟಬಹುದು. ಆದ್ರೆ ಸರಳತೆ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ನೋವು ನಮಗೆ ಗೊತ್ತಾದ್ರೆ ಜೀವಂತವಾಗಿದ್ದೀವಿ ಎಂದರ್ಥ, ಬೇರೆಯವದ ನೋವು ಗೊತ್ತಾದ್ರೆ ನಾವು ಮನುಷ್ಯರಾಗಿದ್ದೀವೆ ಎಂದರ್ಥ ಎಂದು ಭಾವುಕರಾದರು