ತುಮಕೂರು: ಕಾಂಗ್ರೆಸ್ ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ ಎಂದು ಶಾಸಕ ಮುನಿರತ್ನ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ನವರು ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂದು ಚುನಾವಣೆಗೋಸ್ಕರ ನಾಟಕ ಮಾಡುತ್ತಿದ್ದಾರೆ.
ಗ್ಯಾರಂಟಿಗಳ ರೂಪದಲ್ಲಿ 52,000 ಕೋಟಿ ರೂ. ಸಾರ್ವಜನಿಕ ತೆರಿಗೆ ಹಣವನ್ನು ಕೊಟ್ಟು ಪೋಲು ಮಾಡಿದ್ದಾರೆ. ಈಗ ಪದೇ ಪದೇ ಹಣ ಕೇಳಿಕೊಂಡು ಇವರು ಕೇಂದ್ರಕ್ಕೆ ಹೋಗ್ತಾರೆ. ತೆರಿಗೆ ಹಣವನ್ನು ದಾನ ಮಾಡೋ ಮುಂಚೆ ಯೋಚನೆ ಮಾಡಬೇಕಿತ್ತು. ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಗ್ಯಾರಂಟಿ ಯೋಜನೆ ಘೋಷಣೆ ಮಾಡೋ ಮುಂಚೆ ಯೋಚನೆ ಮಾಡಬೇಕಿತ್ತು. ಯಾವುದೇ ಯೋಚನೆ ಮಾಡದೆ ಅಧಿಕಾರದ ದಾಹಕ್ಕಾಗಿ ಐದು ಗ್ಯಾರಂಟಿ, ಆರು ಗ್ಯಾರಂಟಿ ಘೋಷಣೆ ಮಾಡಿದರು. ಇಲ್ಲಿ ದಾನ ಕೊಟ್ಟು ಅಲ್ಲಿ ಭಿಕ್ಷೆ ಬೇಡಲು ಹೋಗುತ್ತಾರೆ. ಇವರು ಕೇಂದ್ರದಿಂದ ಹಣ ಕೇಳೋದು ರಾಜ್ಯದ ಅಭಿವೃದ್ಧಿಗಲ್ಲ. ಹಣತಂದು ಲೋಕಸಭಾ ಚುನಾವಣೆಗೆ ಇನ್ನಷ್ಟು ಗ್ಯಾರಂಟಿ ಕೊಡಲು ಎಂದಿದ್ದಾರೆ. ಚುನಾವಣೆ ಮುಗಿದ ನಂತರ ಕಾಂಗ್ರೆಸ್ನವರು ಗ್ಯಾರಂಟಿ ನಿಲ್ಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.