ಗದಗ: ಹಿಂದೂ ಧರ್ಮ ಹುಟ್ಟಿಸಿದ್ಯಾರು ಎಂಬ ಗೃಹಸಚಿವರ ವಿವಾದಾತ್ಮಕ ಹೇಳಿಕೆ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಗೃಹಸಚಿವ ಪರಮೇಶ್ವರ್ ಅವರ ಸನಾತನ ಧರ್ಮ ಹೇಳಿಕೆ ಖಂಡಿಸಿ ಗದಗದಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ಮಾತನಾಡಿದ ಅವರು, ಸೂರ್ಯ, ಚಂದ್ರ, ಭೂಮಿ ಯಾವಾಗ ಹುಟ್ಟಿದೆ ಅಂತ ಕೇಳೋಕೆ ಆಗುತ್ತಾ? ಸನಾತನ ಧರ್ಮ ಅತ್ಯಂತ ಪುರಾತನ ಧರ್ಮ. ಹಿಂದೂ ಧರ್ಮ ಇರುವುದರಿಂದಲೇ ನೀವು ಬದುಕುತ್ತಿದ್ದೀರಿ. ಪರಮೇಶ್ವರ್ ಗೃಹ ಸಚಿವ ಆಗಿದ್ದೇ ಹಿಂದೂ ಧರ್ಮದಿಂದ. ಬೇರೆ ಧರ್ಮ ಇದ್ದರೆ ನೀವು ಗೃಹಸಚಿವರು ಆಗುತ್ತಿರಲಿಲ್ಲ. ನಿಮ್ಮನ್ನು ಆ ಸ್ಥಾನದಲ್ಲಿ ಕೂರಿಸುತ್ತಿರಲಿಲ್ಲ ಎಂದು ಹರಿಹಾಯ್ದರು.
ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಬಗ್ಗೆ ಮಾತನಾಡುವ ಧೈರ್ಯ ನಿಮಗೆ ಇದೆಯಾ? ಹಿಂದೂಗಳು ತಾಳ್ಮೆ, ಸಹನೆ ಇಂದ ಇದ್ದೇವೆ. ಹಾಗಂತ ಏನು ಬೇಕಾದರೂ ಮಾತನಾಡಬಹುದಾ? ಸ್ವಾತಂತ್ರ್ಯ ಅಂದ್ರೆ ಇದೇನಾ? ಇದು ಸ್ವೇಚ್ಛಾಚಾರ ಅಂತ ಹೇಳುತ್ತೇನೆ. ಎಲ್ಲಾ ಧರ್ಮ, ಜಾತಿಯಲ್ಲೂ ನ್ಯೂನತೆ ಇವೆ. ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಧರ್ಮದಲ್ಲಿ ನ್ಯೂನತೆ ಇಲ್ವಾ? ನ್ಯೂನತೆ ಸರಿ ಮಾಡುವ ಪ್ರಯತ್ನ ಮಾಡೋಣ. ಆದರೆ ಹಿಂದೂ ಧರ್ಮ ನಾಶ ಮಾಡುತ್ತೇನೆ ಅನ್ನುವ ನೀಚತನ ನಡೆಯೋದಿಲ್ಲ ಎಂದು ಗುಡುಗಿದರು