ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6,000ರೂ. ಸಹಾಯಧನ ಪಡೆವ ದೇಶದ ಕೃಷಿಕರ ಮನೆ ಬಾಗಿಲಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ವಿತರಣಾ ಅಭಿಯಾನ ಆರಂಭವಾಗಿದ್ದು ಡಿ. 31ರ ತನಕ ನಡೆಯಲಿದೆ.
ದೇಶದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 11 ಕೋಟಿ ರೈತರ ನೋಂದಣಿಯಾಗಿದ್ದು 2.60 ಲಕ್ಷ ಕೋಟಿ ರೂ.
ಖಾತೆಗೆ ಜಮೆಯಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಕೇವಲ 7.35 ಕೋಟಿ ರೈತರಿಗಷ್ಟೇ ಸಿಕ್ಕಿದ್ದು 8.85 ಲಕ್ಷ ಕೋಟಿ ರೂ. ಸಾಲ ವಿತರಣೆಯಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳಾಗಿದ್ದರೂ ಕೆಸಿಸಿ ಪಡೆಯದ 3.65ಕೋಟಿ ರೈತರ ಮನೆ ಮನೆಗೆ ಕೆಸಿಸಿ ಅಭಿಯಾನದ ಮೂಲಕ ಸುಲಭ ಸಾಲ ಒದಗಿಸುವ ಗುರಿಯಿದೆ. ರಾಜ್ಯದಲ್ಲಿ 47.80 ಲಕ್ಷ ಕಿಸಾನ್ ಸಮ್ಮಾನ್ ರೈತರಿದ್ದು 35 ಲಕ್ಷ ರೈತರಿಗೆ ಕೆಸಿಸಿ ಸಾಲ ವಿತರಿಸಲಾಗಿದೆ.
ಬ್ಯಾಂಕುಗಳ ಪ್ರತಿ ಶಾಖೆಗೂ ಕಿಸಾನ್ ಸಮ್ಮಾನ್ ನಿಧಿ ಪಡೆವ ಹಾಗೂ ಕೆಸಿಸಿ ಹೊಂದಿದ ರೈತರ ಪಟ್ಟಿಯನ್ನು ರವಾನಿಸಲಾಗುತ್ತದೆ. ಕೆಸಿಸಿಗೆ ರೈತ ಯಾಕೆ ಒಳಪಟ್ಟಿಲ್ಲ ಎನ್ನುವ ವಿಚಾರ ವಿಮರ್ಶೆಯೊಂದಿಗೆ ಕೆಸಿಸಿ ಬೇಡವೆಂದಾದರೆ ರೈತನ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು.
ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಒಂದು ಸೆಂಟ್ಸ್‌ನಿಂದ ಗರಿಷ್ಠ 5 ಹೆಕ್ಟೇರ್ ಭೂಮಿ ಇದ್ದರೂ ವಾರ್ಷಿಕ 6,000 ರೂ. ದೊರೆಯುತ್ತದೆ. ಆದರೆ ಕೆಸಿಸಿ ಪಡೆಯಬೇಕಿದ್ದರೆ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ನಿರ್ಣಯದಂತೆ ಕನಿಷ್ಠ 15 ಸೆಂಟ್ಸ್ ಜಾಗ ಹೊಂದಿರಲೇಬೇಕೆನ್ನುವ ನಿಯಮ ಅಭಿಯಾನದ ಯಶಸ್ಸಿಗೆ ಅಡ್ಡಗಾಲಾಗುತ್ತಿದೆ.