ಬೆಂಗಳೂರು: ಹಿಂದಿನ ಪ್ರವಾಹದ ಅನುಭವದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಜೀವಹಾನಿ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಅವರು ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು.
ಪ್ರವಾಹ ಬಂದಾಗ ಬಹಳ ರೈತರನ್ನು ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪ್ರವಾಹದ ಮುನ್ಸೂಚನೆ ಬಂದ ಕೂಡಲೇ ಸ್ಥಳಾಂತರಕ್ಕೆ ಕ್ರಮ ವಹಿಸಿ. ಹಿಂದಿನ ಸರ್ಕಾರದ ವತಿಯಿಂದ ಪರ್ಯಾಯವಾಗಿ ಕಟ್ಟಲಾಗಿರುವ ಮನೆಗಳು ಯಾರೂ ವಾಸ ಮಾಡಲು ಕೂಡ ಯೋಗ್ಯವಲ್ಲ ಎನ್ನುವ ದೂರುಗಳು ಜನರಿಂದ ವ್ಯಾಪಕವಾಗಿ ಬರುತ್ತಿವೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳ ಕಡೆಗೆ ಹೆಚ್ಚು ಒತ್ತು ನೀಡಿ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.
ಅನಾಹುತಗಳನ್ನು ತಪ್ಪಿಸಲು ಹೆಚ್ಚಿನ ಗಮನ ನೀಡಬೇಕು. ಜಿಲ್ಲಾಧಿಕಾರಿಗಳು ಪದೇ ಪದೇ ಪ್ರವಾಹವಾಗುವ ಸ್ಥಳಗಳಲ್ಲಿ ಜನರಿಗೆ ಮನವರಿಕೆ ಮಾಡಿ ಸ್ಥಳಾಂತರ ಮಾಡಿ ಜೀವಹಾನಿ ತಪ್ಪಿಸಬೇಕು ಎಂದು ಸೂಚಿಸಿದರು. ನೆರೆ ಬಂದು ನೀರು ಹೆಚ್ಚಾದರೆ ಅದರ ಬಳಿ ಜನರು ಹೋಗದಂತೆ ಜಿಲ್ಲಾಡಳಿತ ಕ್ರಮ ವಹಿಸಲು ಸೂಚಿಸಿದರು. ಜನರಿಗೆ ಈ ಬಗ್ಗೆ ಎಚ್ಚರಿಕೆ ನೀಡುವುದು ಹಾಗೂ ಅರಿವು ಮೂಡಿಸುವ ಕೆಲಸ ಮಾಡಿ ಪ್ರಾಣಹಾನಿಯನ್ನು ತಪ್ಪಿಸಬೇಕು ಎಂದರು.