ಉಡುಪಿ: 6 ತಿಂಗಳ ಆಡಳಿತದಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರ ಸಂಪೂರ್ಣ ವಿಫಲವಾಗಿ ಕುಸಿತ ಕಂಡಿದೆ. ಕಂಡು ಕೇಳರಿಯದ ಬರ ಜನರನ್ನು, ರೈತರನ್ನು ಕಾಡುತ್ತಿದೆ. ರಾಜ್ಯದ 195 ತಾಲೂಕಿನಲ್ಲಿ ಬರ ಘೋಷಣೆ ಮಾಡಿದ್ದರೂ ಪರಿಹಾರಕ್ಕೆ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.
ಮಳೆ ಕೊರತೆಯಿಂದ 30 ಸಾವಿರ ಕೋಟಿ ರೂ. ನಷ್ಟ ಎಂದು ಸರ್ಕಾರ ವರದಿಯಲ್ಲಿ ನೀಡಿದೆ. ತಕ್ಷಣ ಕನಿಷ್ಟ 5 ಸಾವಿರ ಕೋಟಿ ರೂ. ಕೂಡಾ ಬಿಡುಗಡೆ ಮಾಡಿಲ್ಲ. ಕೇಂದ್ರಕ್ಕೆ ಮನವಿ ಕೊಟ್ಟಿದ್ದೇವೆ ಎಂದು ಹೇಳೋದ್ರಲ್ಲೇ ತಲ್ಲೀನವಾಗಿದೆ. ಸರ್ಕಾರ ರೈತರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿಲ್ಲ. ಬೀಜ ವಿತರಿಸಿ ಗೊಬ್ಬರ ಖರೀದಿಗೆ ಅನುದಾನ ಕೊಡಿ, ನೀರಾವರಿ ವ್ಯವಸ್ಥೆ ಮಾಡಿ ಗೋಶಾಲೆ ತೆರೆಯಿರಿ ಎಂದು ಸಲಹೆ ನೀಡಿದರು. ಅಧ್ಯಯನ ಮಾಡೋದರಲ್ಲೇ ಕಾಲ ಕಳೆಯಬೇಡಿ ಎಂದರು.
ವಿದ್ಯುತ್ ಕೊರತೆಯಾಗಿದೆ. ದಿನಕ್ಕೆ 7 ಗಂಟೆ 3 ಫೇಸ್ ಪವರ್ ಎಂದು ಘೋಷಿಸಿ 2 ಗಂಟೆಗೆ ಇಳಿಸಿದ್ದಾರೆ. ರೈತರು ಕಂಗಾಲಾಗಿದ್ದರೂ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲ. ಕಿಸಾನ್ ಸಮ್ಮಾನ್ ಯೋಜನೆಗೆ 1 ರೂ.ಯನ್ನೂ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರ ರಾಜ್ಯದಿಂದ 4 ಕೇಂದ್ರದಿಂದ 6 ಸಾವಿರ ರೂ. ಕೊಡುತ್ತಿದ್ದನ್ನು ನಿಲ್ಲಿಸಿ ರೈತರ ಖಾತೆಯ ಹಣಕ್ಕೆ ಕನ್ನ ಹಾಕಿದ್ದಾರೆ. ರೈತರ ಮೇಲೆ ಬದ್ಧತೆ ಇದ್ದರೆ ಹಣ ಬಿಡುಗಡೆ ಮಾಡಿ ಎಂದು ಶ್ರೀನಿವಾಸ ಪೂಜಾರಿ ಉಡುಪಿಯಲ್ಲಿ ವಾಗ್ದಾಳಿ ನಡೆಸಿದರು.