ನವದೆಹಲಿ: ಮಾನಹಾನಿ ಪ್ರಕರಣದಲ್ಲಿ (Defamation Case) ಎರಡು ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (D.Y.Chandrachud) ಹೇಳಿದ್ದಾರೆ.
ಪ್ರಕರಣವನ್ನು ಶೀಘ್ರ ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ರಾಹುಲ್ ಗಾಂಧಿ ಪರ ಮಂಗಳವಾರ ಮನವಿ ಮಾಡಿದರು. ಶುಕ್ರವಾರ ಅಥವಾ ಸೋಮವಾರ ವಿಚಾರಣೆಗೆ ಪಟ್ಟಿ ಮಾಡುವಂತೆ ಅಭಿಷೇಕ್ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಶುಕ್ರವಾರ ವಿಚಾರಣೆಗೆ ಪಟ್ಟಿ ಮಾಡಲು ಸೂಚನೆ ನೀಡಿದರು.
ಎಲ್ಲಾ ಕಳ್ಳರಿಗೂ ಮೋದಿ ಉಪನಾಮವಿದೆ ಎನ್ನುವ ಹೇಳಿಕೆ ಹಿನ್ನೆಲೆ ಮಾನಹಾನಿ ಪ್ರಕರಣದಲ್ಲಿ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.