ಯಶವಂತಪುರ ಜ.25 : ಕ್ರೀಡಾಪಟುಗಳಿಗೆ ಅತೀವ ಗೌರವ ಹಾಗೂ ಪ್ರೋತ್ಸಾಹ ನೀಡುವ ಭಾರತೀಯರು, ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿಯೇ ನಗರ ಪ್ರದೇಶದ ಬಹುತೇಕ ಜನರು ಮಧುಮೇಹದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆಎಂದು ಆದಿ ಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಳವಳ ವ್ಯಕ್ತ ಪಡಿಸಿದರು. ಕುಂಬಳಗೂಡು ಸಮೀಪದ ಬಿಜಿಎಸ್ ನಾಲೆಜ್ಡ್ ಸಿಟಿಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ವೈಭವ-2024 ರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವ್ಯಾಯಾಮ ಹಾಗೂ ಶ್ರಮ ರಹಿತ ಜೀವನ ಶೈಲಿಯಿಂದ ಮನು ಕುಲದ ಸರ್ವತೋಮುಖ ಬೆಳವಣಿಗೆಗೆ ಧಕ್ಕೆಯಾಗಲಿದೆ. ದಿನದ ಕೆಲ ಸಮಯವನ್ನು ಕ್ರೀಡೆಗಾಗಿ ಮೀಸಲಿಟ್ಟರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಲಿದೆ ಎಂದು ಸಲಹೆ ನೀಡಿದರು.
ಐಪಿಎಸ್ ಆಧಿಕಾರಿ ರವಿಕಾಂತೇಗೌಡ ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಮಾತನಾಡಿ ಓದಿನ ಜೊತೆಗೆ ಕ್ರೀಡಾ ಮನೋಭಾವವನ್ನು ಬೆಳೆಸುವ ಏಕೈಕ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಿಜಿಎಸ್ ಪಾತ್ರವಾಗಿದ್ದು,
ಬದಲಾದ ಸನ್ನಿವೇಶದಲ್ಲಿ ಕ್ರೀಡಾ ಕ್ಷೇತ್ರವು ಬದುಕನ್ನು ರೂಪಿಸುವ ಮಾರ್ಗವಾಗಿ ಬದಲಾಗಿದೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದ್ದು, ಪೊಲೀಸ್ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲಾತಿ ನೀಡಲಾಗುತ್ತಿದೆ ಎಂದರು.
ಒಳ್ಳೆಯ ಮನಸ್ಸು ಒಳ್ಳೆಯ ದೇಹದಲ್ಲಿ ಇರುತ್ತದೆ. ಹೀಗಾಗಿ ಕ್ರೀಡೆಯ ಮೂಲಕ ಸದೃಢ ದೇಹ ಹೊಂದಬೇಕು ಎಂದು ಕಿವಿಮಾತು ಹೇಳಿದರು ಆರೋಗ್ಯಪೂರ್ಣ ಸಮಾಜದಿಂದ ದೇಶದ ಆರ್ಥಿಕತೆಯು ವೃದ್ದಿಸಲಿದೆ. ಐಕ್ಯತೆಯೂ ಮೂಡಲಿದೆ ಎಂದು ಅಭಿಪ್ರಾಯ ಪಟ್ಟರು. ಬಿಜಿಎಸ್ ಹಾಗೂ ಎಸ್ ಜೆಬಿ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶನಾಥ ಸ್ವಾಮೀಜಿ, ಐಪಿಎಸ್ ಅಧಿಕಾರಿ ರವಿಕಾಂತೇಗೌಡ, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ನಿಶ್ಚಿತಾ, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ದೊಡ್ಡಗಣೇಶ್, ಕರ್ನಾಟಕ ಕ್ರಿಕೆಟ್ ಪಟು ಅಯ್ಯಪ್ಪ, ನಟ ರವಿ ಚೇತನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ : ಕುಂಬಳಗೂಡು ಸಮೀಪದ ಬಿಜಿಎಸ್ ನಾಲೆಜ್ಡ್ ಸಿಟಿಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ವೈಭವ-2024 ರ ಕ್ರೀಡಾಕೂಟಕ್ಕೆ ಆದಿ ಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಬಿಜಿಎಸ್ ಹಾಗೂ ಎಸ್ ಜೆಬಿ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶನಾಥ ಸ್ವಾಮೀಜಿ, ಐಪಿಎಸ್ ಅಧಿಕಾರಿ ರವಿಕಾಂತೇಗೌಡ, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ನಿಶ್ಚಿತಾ, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ದೊಡ್ಡಗಣೇಶ್, ಕರ್ನಾಟಕ ಕ್ರಿಕೆಟ್ ಪಟು ಅಯ್ಯಪ್ಪ, ನಟ ರವಿ ಚೇತನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.