ನವದೆಹಲಿ ;- ಭಯೋತ್ಪಾದನೆ ನಿಗ್ರಹಕ್ಕೆ ನಿರ್ಣಾಯಕ ಕ್ರಮ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಎಸ್ಸಿಒ ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲ ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದು, ಅದನ್ನೇ ತಮ್ಮ ನೀತಿಯನ್ನಾಗಿ ಮಾಡಿಕೊಂಡಿವೆ.
ಈ ದೇಶಗಳ ಇಂತ ನಡೆಯನ್ನು ಖಂಡಿಸಲು ಎಸ್ಸಿಒ ರಾಷ್ಟ್ರಗಳು ಹಿಂಜರಿಯಬಾರದು. ಜೊತೆಗೆ, ಭಯೋತ್ಪಾದಕ ಚಟುವಟಿಕೆಗಳ ವಿರುದ್ಧದ ಹೋರಾಟದಲ್ಲಿ ದ್ವಂದ್ವ ನಿಲುವುಗಳು ಕೂಡ ಇರಬಾರದು’ ಎಂದು ಮೋದಿ ಹೇಳಿದರು.
ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದವನ್ನು ಸೂಚ್ಯವಾಗಿ ಪ್ರಸ್ತಾಪಿಸಿದ ಮೋದಿ, ‘ನಮ್ಮ ಅಗತ್ಯಗಳು, ಸೂಕ್ಷ್ಮ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಪ್ರತಿ ಸದಸ್ಯ ರಾಷ್ಟ್ರದ ಜವಾಬ್ದಾರಿ. ಸಹಕಾರ ಹಾಗೂ ಸಮನ್ವಯದೊಂದಿಗೆ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಅಗತ್ಯ’ ಎಂದರು.
ಎಲ್ಲರನ್ನು ಒಳಗೊಂಡ ಅಭಿವೃದ್ಧಿಗಾಗಿ ಡಿಜಿಟಲ್ ತಂತ್ರಜ್ಞಾನ ಬಳಕೆಯಾಗಬೇಕು ಎಂಬುದಕ್ಕೆ ‘ಭಾಷಿಣಿ’ ಉತ್ತಮ ನಿದರ್ಶನ’ ಎಂದೂ ಹೇಳಿದರು.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಕಜಕಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ಉಜ್ಬೇಕಿಸ್ತಾನದ ನಾಯಕರು ಪಾಲ್ಗೊಂಡಿದ್ದರು.