ಚಿಕ್ಕಬಳ್ಳಾಪುರ: ಕೆಲ ದಿನಗಳ ಹಿಂದೆಯಷ್ಟೇ ಕೇರಳದ ಕೋಝಿಕೋಡ್‌ನಲ್ಲಿ ಪತ್ತೆಯಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಝಿಕಾ ವೈರಸ್ (Zika Virus) ಇದೀಗ ಚಿಕ್ಕಬಳ್ಳಾಪುರದಲ್ಲಿ (Chikkaballapur) ಪತ್ತೆಯಾಗಿದೆ. ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಸೊಳ್ಳೆಗಳನ್ನ ಪರೀಕ್ಷೆಗೆ ಒಳಪಡಿಸಿದಾಗ ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರೋದು ಧೃಡವಾಗಿದೆ.
ಹೀಗಾಗಿ ತಲಕಾಯಲಬೆಟ್ಟ ಗ್ರಾಮ ಸೇರಿದಂತೆ ಸುತ್ತಮುತ್ತಲ 5 ಕಿಮೀ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದ (Health Department) ಸರ್ವೆ ಕಾರ್ಯ ರ‍್ಯಾಂಡಮ್ ಚೆಕಪ್ ಮಾಡಲಾಗುತ್ತಿದೆ. ತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ವಡ್ಡಹಳ್ಳಿ, ಬಚ್ಚಹಳ್ಳಿ ಗ್ರಾಮದ 880 ಮನೆಗಳಲ್ಲಿ ಸರಿಸುಮಾರು 4,800 ಜನರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಈಗಾಗಲೇ 30 ಮಂದಿ ಗರ್ಭಿಣಿಯರು ಹಾಗೂ ಜ್ವರದಿಂದ ಬಳಲುತ್ತಿರುವ 3 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದೆ. ಇನ್ನೂ ಮುಂಜಾಗ್ರತಾ ಕ್ರಮವಾಗಿ ಜ್ವರದಿಂದ ಬಳಲುತ್ತಿರುವವರ ಮೇಲೆ ನಿಗಾವಹಿಸಲಾಗಿದೆಯಾದರೂ ಝಿಕಾ ವೈರಸ್ ಸೋಂಕು ಹುಟ್ಟುವ ಮಕ್ಕಳ ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಗರ್ಭಿಣಿಯರ ಮೇಲೂ ನಿಗಾ ವಹಿಸಲಾಗಿದೆ.