ಆನೇಕಲ್: ನಕಲಿ ಟ್ರಸ್ಟ್ ಮೂಲಕ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ವಂಚನೆ ಮಾಡಿರುವ ಪ್ರಕರಣ ಬಯಲಿಗೆ ಬಂದಿದೆ. ಹೌದು ಬ್ಲೂ ವಿಂಗ್ಸ್ ಎಂಬ ಹೆಸರಿನ ನಕಲಿ ಟ್ರಸ್ಟ್ ಮೂಲಕ ಪವಿತ್ರಾ & ಗ್ಯಾಂಗ್ ವಂಚನೆ ಮಾಡಿದೆ. ಪವಿತ್ರಾ ತಮಿಳುನಾಡಿನ ಹೊಸೂರು ಮೂಲದವಳು. ಸದ್ಯ ಆನೇಕಲ್, ಚಂದಾಪುರ, ಸೂರ್ಯ ನಗರ, ಹೊಸಕೋಟೆ ಅತ್ತಿಬೆಲೆಯಲ್ಲಿ ವಂಚನೆ ಪ್ರಕರಣ ಬಯಲಾಗಿದೆ.
ನಮ್ಮ ಟ್ರಸ್ಟ್ ಗೆ ಕೇಂದ್ರ ಸರ್ಕಾರದಿಂದ 17,000 ಕೋಟಿ ರೂ. ಹಣ ಬಂದಿದೆ. ನಿರ್ಮಲಾ ಸೀತಾರಾಮನ್ ಅವರು ನಮಗೆ ವರ್ಗಾವಣೆ ಮಾಡಿದ್ದಾರೆ. ಅಮೆರಿಕದಿಂದಲೇ ನಮ್ಮ ಟ್ರಸ್ಟ್ ಗೆ ಹಣ ಸಂದಾಯ ಆಗಿದೆ. ಆ ಹಣವನ್ನು ನಾವು ಲೋನ್ ಮೂಲಕ ನಿಮಗೆ ಕೊಡುತ್ತೇವೆ. 10 ಲಕ್ಷ ಕೊಟ್ಟರೆ 5 ಲಕ್ಷ ಮಾತ್ರ ವಾಪಸ್ ಕಟ್ಟಬೇಕು. 5 ಲಕ್ಷ ನಿಮಗೆ ಸಬ್ಸಿಡಿಯಾಗಿ ಸಿಗುತ್ತದೆ. ನೀವು ಲೋನ್ ಪಡಿಬೇಕು ಅಂದ್ರೆ ಮುಂಚಿತವಾಗಿ ಹಣ ಕಟ್ಟಬೇಕು. ಈ ರೀತಿ ಹೇಳಿ ನಯವಂಚಕರ ತಂಡ ವಂಚನೆ ಮಾಡಿದೆ.
ವಂಚಕರ ತಂಡವು ನೂರಾರು ಜನ ಮಹಿಳೆಯರಿಂದ 2019 ರಿಂದ ನಿರಂತರವಾಗಿ ಹಣ ವಸೂಲಿ ಮಾಡಿದೆ. ಮೋಸ ಹೋಗಿರುವ ಮಹಿಳೆಯರು 5 ಸಾವಿರದಿಂದ 25 ಸಾವಿರದವರೆಗೆ ಹಣ ಕಟ್ಟಿದ್ದಾರೆ. ಆದರೆ ಈಗ ಹಣ ಕಟ್ಟಿದವರು ಲೋನ್ ಕೇಳಿದಾಗ ವಂಚಕೀಯ ನಾಟಕ ಬಟಾಬಯಲಾಗಿದ್ದು, ವಂಚನೆಗೆ ಒಳಗಾಗಿರುವ ಮಹಿಳೆಯರು ಕಂಗಾಲಾಗಿದ್ದಾರೆ.
ಪರಿಚಯ ಅಂತ ಹೇಳಿ ನೂರಾರು ಜನರಿಂದ ಮಹಿಳೆಯರು ಹಣ ಕಟ್ಟಿಸಿದ್ದರು. ಅಕ್ಕ-ಪಕ್ಕದ ಮನೆ ಊರಿನವರಿಂದ ಹಣ ಕಟ್ಟಿಸಿದ್ದ ಮಹಿಳೆಯರಿಗೆ ಇದೀಗ ಆಘಾತವಾಗಿದೆ. ಈಗಾಗಲೇ ಪವಿತ್ರ ಮೇಲೆ ಸೂರ್ಯ ನಗರದಲ್ಲಿ ದೂರು ದಾಖಲಾಗಿದೆ. ಇತ್ತ ಮೋಸ ಹೋದ ಮಹಿಳೆಯರು ಅತ್ತಿಬೆಲೆ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.