ರಾಜಧಾನಿ ಬೆಂಗಳೂರಿನಲ್ಲಿ ಮುಂದುವರಿದ ಮಳೆ, ಹೊಳೆಯಂತಾದ ರಸ್ತೆಗಳು

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ತಡರಾತ್ರಿ ಧಾರಾಕಾರ ಮಳೆಯಾಗಿದೆ. ಪ್ರಮುಖ ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿ ಹೊಳೆಯಂತೆ ಮಳೆ ನೀರು ಹರಿಯಿತು. ಬೆಂಗಳೂರಿನ ಸಹಕಾರ ನಗರ ವ್ಯಾಪ್ತಿಯಲ್ಲಿ ‌ಸುರಿದ ಭಾರಿ ಮಳೆಯಿಂದ ಹಲವು ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಸಿತ್ತು. ಮನೆಗಳಲ್ಲಿದ್ದ ಸಾಮಗ್ರಿ ನೀರಿನಲ್ಲಿ ತೊಯ್ದವು. ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದರು.
ಭಾರಿ ಮಳೆ ಸುರಿದ ವೇಳೆ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯ ಸಂಗತಿಯಾಗಿದೆ. ಬಿಬಿಎಂಪಿ ಶಾಶ್ವತವಾಗಿ ಸಮಸ್ಯೆ ಪರಿಹರಿಸುತ್ತಿಲ್ಲ. ಸಮಸ್ಯೆಯಾದಾಗ‌ ಮಾತ್ರ ‌ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ‌ನೀಡುತ್ತಾರೆ. ಬಳಿಕ ಈ ಪ್ರದೇಶಕ್ಕೆ ಬರುವುದಿಲ್ಲ ಎಂದು ಆಪಾದಿಸಿದರು.

ಪೀಣ್ಯ, ಯಶವಂತಪುರ, ಶೇಷಾದ್ರಿಪುರ, ಮೆಜಿಸ್ಟಿಕ್, ಆಡುಗೋಡಿ, ಇಂದಿರಾನಗರ, ಹೆಬ್ಬಾಳ, ಯಲಹಂಕ, ರಾಜಾಜಿನಗರ ಭಾಗದಲ್ಲಿ ‌ಮಳೆಯಾಗಿದೆ. ಬುಧವಾರ ಸಹ ಕೆಲವು ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು. ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜರತ್ನಂ ವೃತ್ತದಲ್ಲಿ ಮರವೊಂದು ರಸ್ತೆಗೆ ಉರುಳಿ ಬಿದ್ದು‌ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಿಬಿಎಂಪಿ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹೆಬ್ಬಾಳ ಪೊಲೀಸ್ ಠಾಣೆಯ‌ ವ್ಯಾಪ್ತಿಯ ರಾಯಲ್ ಮಾರ್ಟ್ ಬಳಿ ಗಾಳಿಗೆ ವಿದ್ಯುತ್ ಕಂಬವೊಂದು ನಿಲುಗಡೆ ಮಾಡಿದ್ದ ಕಾರಿನ ಮೇಲೆ ಉರುಳಿ ಬಿದ್ದಿತ್ತು. ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರಿಂದ ಅಪಾಯ ತಪ್ಪಿತು. ವಿಜಯನಗರ, ಕೆಂಗೇರಿ, ಅಶೋಕ ನಗರ, ಕೋರಮಂಗಲ ಭಾಗದಲ್ಲೂ ಮಳೆಯಾಗಿದೆ. ಎರಡು ದಿನಗಳಲ್ಲಿ ಸುರಿದ ಮಳೆಯಿಂದ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಬಂದಿದೆ.

Loading

Leave a Reply

Your email address will not be published. Required fields are marked *