ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ವಾರ್ಡ್ಗಳ ಸಂಖ್ಯೆಯನ್ನು 250 ಕ್ಕೇರಿಸಲು ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ಈ ಸಂಬಂಧ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ಸಮಿತಿ ರಚನೆಯಾಗಿದ್ದು, ನಾಳೆ ಅಥವಾ ಸೋಮವಾರ ವಾರ್ಡ್ ಮರುವಿಂಗಡಣೆ ವರದಿ ಸಲ್ಲಿಕೆಯಾಗಲಿದೆ. ಈ ವರದಿಯನ್ನು ಸರ್ಕಾರ ಒಪ್ಪಿದರೇ ಮುಂದಿನ ಮೂರು ತಿಂಗಳಲ್ಲಿಯೇ ಪಾಲಿಕೆ ಚುನಾವಣೆ ನಡೆಯುವುದು ಪಕ್ಕಾ ಎನ್ನಲಾಗುತ್ತಿದೆ. ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ಪೂರ್ವ ಚುನಾವಣಾ ಸಮಿತಿ ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ. ಸಮಿತಿ ಬೆಂಗಳೂರಿನ ಸಚಿವರು, ಶಾಸಕರು, ಕಾಂಗ್ರೆಸ್ ಮಾಜಿ ಮೇಯರ್ ಹಾಗೂ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿ ಸರ್ಕಾರ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗುತ್ತದೆ.