ಇಸ್ರೇಲ್ ಪದೇ ಪದೇ ಗಾಜಾ ಪಟ್ಟಿಯಲ್ಲಿ ತಾನು ಕಾರ್ಯಾಚರಣೆ ನಡೆಸುವುದನ್ನು ಒತ್ತಿ ಹೇಳುತ್ತಿರುವುದು, ಹೆಚ್ಚಿನ ಪ್ಯಾಲೆಸ್ತೀನ್ ಗುರಿಗಳ ಮೇಲೆ ದಾಳಿ ನಡೆಸುವುದು ಮತ್ತು ಲೆಬನಾನಿನ ಮಿಲಿಟರಿ ಸಂಘಟನೆ ಹೆಜ್ಬೊಲ್ಲಾ ಜೊತೆ ಚಕಮಕಿ ನಡೆಸುತ್ತಿರುವುದು ಈ ಯುದ್ಧ ಇನ್ನಷ್ಟು ದೊಡ್ಡದಾಗುವ ಅಪಾಯಗಳನ್ನು ಸೂಚಿಸಿದೆ.
ಇರಾನ್ ನಿರಂತರವಾಗಿ ಹೆಜ್ಬೊಲ್ಲಾ ಸಂಘಟನೆ ಮತ್ತು ಹಮಾಸ್ ಉಗ್ರರಿಗೆ ಬೆಂಬಲ ಘೋಷಿಸುತ್ತಾ ಬಂದಿದ್ದು, ಇಸ್ರೇಲ್ ಏನಾದರೂ ತಕ್ಷಣವೇ ಹಿನ್ನಡೆಯದಿದ್ದರೆ ಪರಿಸ್ಥಿತಿಯ ಸಂಭಾವ್ಯ ಉಲ್ಬಣದ ಕುರಿತು ಎಚ್ಚರಿಕೆ ನೀಡಿದೆ. ಗಾಜಾದಲ್ಲಿನ ಆಸ್ಪತ್ರೆಯ ಮೇಲಿನ ದಾಳಿ ಅರಬ್ ಒಕ್ಕೂಟ ತನ್ನ ನಿಲುವನ್ನು ಇನ್ನಷ್ಟು ಗಟ್ಟಿಗೊಳಿಸುವಂತೆ ಮಾಡಿದೆ.
ಜೋ ಬೈಡನ್ ಸರ್ಕಾರ ಮತ್ತು ಪಾಶ್ಚಾತ್ಯ ರಾಷ್ಟ್ರಗಳು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಂಕಷ್ಟಕರ ಸನ್ನಿವೇಶದಲ್ಲಿ ಬೆಂಬಲ ಒದಗಿಸಿವೆ. ಅದರೊಡನೆ, ಅಮೆರಿಕಾದ ಯುದ್ಧ ನೌಕೆಗಳು ಇಸ್ರೇಲ್ ನೆರವಿಗೆ ಬಂದಿದ್ದರೂ, ಇದರಿಂದ ಪರಿಸ್ಥಿತಿ ಏನೂ ಬದಲಾಗಿಲ್ಲ.
ಮಧ್ಯ ಪೂರ್ವದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಅಪಾಯಗಳು ಎದುರಾಗುತ್ತಿರುವ ಸಂದರ್ಭದಲ್ಲಿ, ತೈಲ ಮಾರುಕಟ್ಟೆ ವಿಶ್ಲೇಷಕರು ಭವಿಷ್ಯದಲ್ಲಿ ತೈಲ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಇದರ ಪ್ರಭಾವ ಹೇಗಿರಬಹುದು ಎಂದು ಆತಂಕದಿಂದ ಗಮನಿಸುತ್ತಿದ್ದಾರೆ. ಈ ಯುದ್ಧದಲ್ಲಿ ಲೆಬನಾನ್, ಈಜಿಪ್ಟ್, ಸಿರಿಯಾ ಮತ್ತಿತರ ಅರಬ್ ರಾಷ್ಟ್ರಗಳು ಪಾಲ್ಗೊಳ್ಳುವ ಸಾಧ್ಯತೆಗಳಿದ್ದು, ಐಎಂಎಫ್ ಈಗಾಗಲೇ ಜಾಗತಿಕ ಅರ್ಥ ವ್ಯವಸ್ಥೆಯ ಹಿಂಜರಿತಕ್ಕೆ ಸಿದ್ಧವಾಗಬೇಕು ಎಂದು ಕರೆ ನೀಡಿದೆ.
1973ರಲ್ಲಿ ಕಚ್ಚಾ ತೈಲ ಬೆಲೆ ನಾಲ್ಕು ಪಟ್ಟು ಹೆಚ್ಚಳವಾಗಿತ್ತು. ಆದರೆ ಈಗ ಯಾರೂ ಅಷ್ಟರಮಟ್ಟಿನ ಹೆಚ್ಚಳವನ್ನು ಎದುರು ನೋಡುತ್ತಿಲ್ಲವಾದರೂ, ತೈಲ ಬೆಲೆ ಹೆಚ್ಚಳ ಗ್ರಾಹಕ ಬೆಲೆಯ ಮೇಲೆ ಪರಿಣಾಮ ಬೀರುವ, ಆ ಮೂಲಕ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇಲ್ಲದಿಲ್ಲ. ಈಗಾಗಲೇ ಜಾಗತಿಕ ಆರ್ಥಿಕತೆ ಸಾಕಷ್ಟು ಹಿನ್ನಡೆಯನ್ನು ಅನುಭವಿಸುತ್ತಿದೆ.