ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಹುದ್ದೇಯ ಬಗ್ಗೆ ಭಯ ಬೇಡ, ಸರ್ಕಾರ ಬೀಳಿಸಲು ನಾವು ಯಾರಿಗೂ ಹೇಳಿಕೊಟ್ಟಿಲ್ಲ ಧೈರ್ಯವಾಗಿರಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಲೇವಡಿ ಮಾಡಿದರು. ಮಳೆಯ ಕೊರತೆಯಿಂದ ರೈತರಿಗೆ ಉಂಟಾಗಿರುವ ನಷ್ಟದ ಅಧ್ಯಯನಕ್ಕೆಂದು ಆಗಮಿಸಿದ್ದ ಅವರು ಶಿಡ್ಲಘಟ್ಟ ತಾಲೂಕಿನ ಇದ್ಲೂಡು ಗ್ರಾಮ ಸುತ್ತ ಮುತ್ತ ಬರ ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದರು. ನಂತರ ನಗರದ ಬಿಜೆಪಿ ಕಚೇರಿ ಸೇವಾಸೌಧದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು,
ಮುಖ್ಯಮಂತ್ರಿಗಳಿಗೆ ಸಿಎಂ ಹುದ್ದೆ ಕೈ ತಪ್ಪಲಿದೆ ಎಂಬ ಆತಂಕ ಶುರುವಾಗಿದೆ ಅವರ ಆತಂಕಕ್ಕೆ ಬಿಜೆಪಿಯ ನಾಯಕರ್ಯಾರು ಕಾರಣರಲ್ಲ ಎಂದು ಸ್ಪಷ್ಟ ಪಡಿಸಿದರು. ರಾಜ್ಯದಲ್ಲಿ ಬರ ಆವರಿಸಿದ್ದು, ರೈತರ ಬಗ್ಗೆ ಮುಖ್ಯಮಂತ್ರಿಗಳಿಗೆ ಕಾಳಜಿ ಇಲ್ಲ, ಇಂತಹ ಪರಿಸ್ಥಿತಿಯಲ್ಲಿ ಹಂಪಿಯಲ್ಲಿ ಮುಖ್ಯಮಂತ್ರಿ ತಾಳ ತಪ್ಪದಂತೆ ಡಾನ್ಸ್ ಮಾಡ್ತಾರೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಉತ್ತಮ ನೃತ್ಯಗಾರು ಅದರ ಬಗ್ಗೆ ನಮಗೆ ಮೆಚ್ಚುಗೆ ಇದೆ, ಆದರೆ ಯಾವ ಸಮಯದಲ್ಲಿ ನೃತ್ಯ ಮಾಡಬೇಕು ಎಂಬ ಪ್ರಜ್ಞೆ ಇರಬೇಕು ಎಂದು ವ್ಯಂಗ್ಯವಾಡಿದರು.
ರಾಜ್ಯಸರ್ಕಾರದ ಖಜಾನೆ ಖಾಲಿ ಆಗಿದೆಯೇ? ತಕ್ಷಣ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರೈತರು ಸಂಕಷ್ಟದಲ್ಲಿರುವಾಗಲೇ ವಿದ್ಯುತ್ ಟ್ರಾನ್ಸಫಾರ್ಮರ್ ಗೆ ಎರಡು ಲಕ್ಷ ಹಣ ಕಟ್ಟಬೇಕು ಎಂದು ಹೇಳುವ ಮೂಲಕ ರೈತರಿಗೆ ಬರೆ ಎಳೆಯಲು ಹೊರಟಿದ್ದಾರೆ. ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪಕ್ಷ ಹೋರಾಟ ನಡೆಸಲಿದೆ ಎಂದರು.