ತುಮಕೂರು: ಬಡ್ಡಿ ಹಣ ನೀಡುವ ವಿಚಾರದಲ್ಲಿ ನಡೆದಿದ್ದ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತ್ತೂರು ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿ ಅಮೃತ್ತೂರು ಗ್ರಾಮದ ಅಬ್ದುಲ್ ಖಲೀಲ್ (55) ಎಂದು ತಿಳಿದು ಬಂದಿದೆ.
ಖಲೀಲ್ ತನ್ನ ಮಗಳ ಮದುವೆಗಾಗಿ ಅದೇ ಗ್ರಾಮದ ತೌಸೀಪ್ ಪಾಷ ಅವರಿಂದ 50,000 ರೂ. ಸಾಲ ಪಡೆದಿದ್ದ. ಪ್ರತಿ ತಿಂಗಳು 5 ಸಾವಿರ ಬಡ್ಡಿ ಕಟ್ಟುತ್ತಿದ್ದ. ಆದರೆ ಕಳೆದ ತಿಂಗಳು ಬಡ್ಡಿ ಹಣ ನೀಡಲು ತಡವಾಗಿದ್ದಕ್ಕೆ ತೌಸೀಪ್ ಪಾಷ ಗಲಾಟೆ ಮಾಡಿದ್ದು, ಕತ್ತಿಯಿಂದ ಹಲ್ಲೆ ಮಾಡಿದ್ದ ಎನ್ನಲಾಗಿದೆ
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಖಲೀಲ್ನನ್ನು ಬೆಂಗಳೂರಿನ ನಿಮಾನ್ಸ್ ಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಖಲೀಲ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಅಮೃತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.