ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಹಿತಿಗಳು ಹಾಗೂ ಚಿಂತಕರು ಭೇಟಿಯಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.ಸಿಎಂ ಸಿದ್ಧರಾಮಯ್ಯ ಅವರನ್ನು ಇಂದು ಹಲವು ಸಾಹಿತಿಗಳು, ಚಿಂತಕರು ಭೇಟಿಯಾದರು.
ಈ ವೇಳೆ 2023ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಗೆಲುವು ಕೋಮುವಾದದ ವಿರುದ್ಧದ ಐತಿಹಾಸಿಕ ಸಂಘರ್ಷ. ಹಿಂದಿನ ಸರ್ಕಾರ ಕೋಮುವಾದವನ್ನು ನಿರ್ಲಜ್ಜ ರೀತಿಯಲ್ಲಿ ಜಾರಿಗೆ ತರಲು ಮುಂದಾಗಿದ್ದು ನಿಜಕ್ಕೂ ಭಯ ಹುಟ್ಟಿಸುವಂತಿತ್ತು. ಆದರೆ ಇವರ ಪ್ರೊಪಗಾಂಡಾ ಅಜೆಂಡಾದಿಂದ ರೋಸಿ ಹೋದ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದರು ಎಂದರು.
ಹೊಸ ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ನಿಟ್ಟಿನಲ್ಲಿ ಸಂವಿಧಾನ ವಿರೋಧಿ, ಕೋಮುವಾದಿ ಪಠ್ಯಪುಸ್ತಕಕ್ಕೆ ಕೂಡಲೇ ತಿದ್ದುಪಡಿ ಮಾಡಿ, ಮಕ್ಕಳ ಮನಸಿನ ಮೇಲೆ ಬೀರುವ ದುಷ್ಪರಿಣಾಮವನ್ನು ತಡೆಯಬೇಕು. ಮುಂದಿನ ವರ್ಷದ ವೇಳೆಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕು. ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು ಎಂದರು.
ಪ್ರೌಢಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಯನ್ನು ಮುಂದುವರೆಸಬೇಕು. ಬೈಸಿಕಲ್ ವಿತರಣೆ ಯೋಜನೆಯನ್ನು ಮುಂದುವರೆಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ವನ್ನು ಸಕ್ರಿಯಗೊಳಿಸಬೇಕು. ರದ್ದಾಗಿರುವ ವಿದ್ಯಾರ್ಥಿವೇತನ ಯೋಜನೆ ಮರುಜಾರಿಯಾಗಬೇಕು ಎಂದು ಹೇಳಿದರು.