ಬೆಂಗಳೂರು: ಬಿಜೆಪಿ (BJP) ನಾಯಕರ ಜೊತೆ ಕುಮಾರಸ್ವಾಮಿ ಮಾತನಾಡಲು ಹೋದಾಗ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಎಂಬ ಸಿಟ್ಟಿನಿಂದ ಸಿಎಂ ಇಬ್ರಾಹಿಂ (CM Ibrahim) ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಜೆಡಿಎಸ್ (JDS) ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ (GT Devegowda) ತಿಳಿಸಿದ್ದಾರೆ. ಒರಿಜಿನಲ್ ಜೆಡಿಎಸ್ ನಮ್ಮದೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ನಲ್ಲಿ ಯಾವುದೇ ಬಂಡಾಯ ಇಲ್ಲ.
ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಇಬ್ರಾಹಿಂ ರಾಜೀನಾಮೆ ಕೊಟ್ಟರು. ಪಕ್ಷ ಸೋತಿದೆ ಅಂತ ರಾಜೀನಾಮೆ ಕೊಟ್ಟಿದ್ದರು. ರಾಷ್ಟ್ರೀಯ ಅಧ್ಯಕ್ಷರು ರಾಜೀನಾಮೆ ಬೇಡ ಅಧ್ಯಕ್ಷನಾಗಿ ಮುಂದುವರಿ ಅಂತ ಹೇಳಿದ್ದರು. ಪ್ರೀತಿಯಿಂದ ಮುಂದುವರಿಯಿರಿ ಅಂತ ಹೇಳಿದ್ರು. ಮೈತ್ರಿ (Alliance) ವಿಚಾರವಾಗಿ ಜೆಪಿ ನಗರ ಮನೆಯಲ್ಲಿ ದೇವೇಗೌಡರು ಸಭೆ ಕರೆದಿದ್ದರು. ಅ ಸಭೆಗೆ ಇಬ್ರಾಹಿಂ ಬಂದು ಸಹಿ ಹಾಕಿದ್ರು. ಬಳಿಕ ಅರಮನೆ ಮೈದಾನದಲ್ಲಿ ನಡೆದ ಸಭೆಗೆ ಹಾಜರಿ ಇದ್ದರು, ಸಹಿ ಹಾಕಿದ್ರು. ದೇವೇಗೌಡರು ಘೋಷಣೆ ಮಾಡಿದ್ರು. ಅವತ್ತು ದೇವೇಗೌಡರ ನಿರ್ಧಾರಕ್ಕೆ ಬದ್ಧ ಅಂತ ಹೇಳಿದ್ರು ಎಂದು ಮಾಹಿತಿ ನೀಡಿದರು.