ಶಿಮ್ಲಾ: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಕಿಯಾಸ್ ಮತ್ತು ನ್ಯೋಲಿಯಲ್ಲಿ ಸೋಮವಾರ ಮುಂಜಾನೆ 3.55ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ನಡೆದಿದೆ.
ಮೇಘಸ್ಫೋಟದಿಂದ 9 ವಾಹನಗಳು ಕೂಡ ಜಖಂಗೊಂಡಿವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಠಾಕೂರ್ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಇದೂವರೆಗೂ ಸುಮಾರು 8 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದಿದ್ದಾರೆ. ಆ ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ, ರಾಜ್ಯದಲ್ಲಿ ಜುಲೈನಲ್ಲಿ ಇದುವರೆಗೆ 284.1 ಮಿ.ಮೀ ಮಳೆಯಾಗಿದೆ. ಈಗಾಗಲೇ ಸುಮಾರು 70 ಸಾವಿರ ಪ್ರವಾಸಿಗರನ್ನು ರಾಜ್ಯದಿಂದ ಸ್ಥಳಾಂತರಿಸಲಾಗಿದೆ. ಮತ್ತು 15 ಸಾವಿರ ವಾಹನಗಳನ್ನು ಕಳುಹಿಸಲಾಗಿದೆ. ಸುಮಾರು 500 ಪ್ರವಾಸಿಗರು ಸ್ವಯಂಪ್ರೇರಣೆಯಿಂದ ಹಿಂದಿರುಗಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
80% ರಷ್ಟು ವಿಪತ್ತು ಪೀಡಿತ ಪ್ರದೇಶಗಳಲ್ಲಿ ವಿದ್ಯುತ್, ನೀರು ಮತ್ತು ಮೊಬೈಲ್ ಫೋನ್ ಸೇವೆಗಳನ್ನು ತಾತ್ಕಾಲಿಕವಾಗಿ ಮರುಸ್ಥಾಪಿಸಲಾಗಿದೆ. ಉಳಿದ ಪ್ರದೇಶಗಳಲ್ಲಿ ಅಗತ್ಯ ಸೇವೆಗಳನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.