ಮಂಗಳೂರು: ಜಿಲ್ಲೆಯ ಹೊರವಲಯದಲ್ಲಿ ಬುಧವಾರ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು, ಇಬ್ಬರಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.
ಮಂಗಳೂರು ಹೊರವಲಯದ ಮುಡುಶೆಡ್ಡೆಯಲ್ಲಿ ನಿನ್ನೆ ಚುನಾವಣಾ ಪಕ್ಷದ ಬೂತ್ ಗೆ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅವರ ಪರವಾಗಿ ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿತ್ತು.
ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ನಡುವಿನ ವಾಗ್ವಾದ ತೀವ್ರಗೊಂಡು ಮಾರಾಮಾರಿ ಕೂಡ ನಡೆದಿದೆ. ಹೀಗಾಗಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಾರಿನ ಮೇಲೆ ಅಲ್ಲದೇ ಡಿಸಿಪಿ ಅಂಶುಕುಮಾರ್ ಕಾರಿನ ಮೇಲೂ ಕಿಡಿಗೇಡಿಗಳಿಲ್ಲ ಕಲ್ಲು ತೂರಾಟ ನಡೆಸಲಾಗಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಅವರು, ಮುಂಜಾಗ್ರತಾ ಕ್ರಮವಾಗಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈಗ ಸ್ಥಳದಲ್ಲಿ ಬಿಗುವಿನ ವಾತಾವರಣದಿಂದ ಕೂಡಿದೆ.