ನೃತ್ಯದ ಜೊತೆಗೆ ವಿವಾದಾತ್ಮಕ ಹೇಳಿಕೆಗಳಿಂದಲೂ ಹೆಚ್ಚು ಸುದ್ದಿಯಾಗಿದ್ದ ಟಾಲಿವುಡ್ ಕೊರಿಯೋಗ್ರಾಫರ್ ರಾಕೇಶ್ ಮಾಸ್ಟರ್ ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ರಾಕೇಶ್ ಮಾಸ್ಟರ್ ನಿನ್ನೆ ವಿಜಯನಗರದಿಂದ ಹೈದರಾಬಾದ್ಗೆ ಬರುವ ವೇಳೆಯಲ್ಲಿ ಸನ್ಸ್ಟ್ರೋಕ್ನಿಂದ ರಕ್ತಸ್ರಾವ ಉಂಟಾಗಿದೆ.
ತಕ್ಷಣವೇ ಅವರನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿ ಗೆ 53 ವರ್ಷ ವಯಸ್ಸಾಗಿತ್ತು.
ತೀವ್ರ ಕುಡಿತದ ಕಾರಣದಿಂದಾಗಿ ರಾಕೇಶ್ಗೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಅದರ ನಡುವೆ ಕೆಲಸವಿಲ್ಲದೆ, ಹಣವಿಲ್ಲದೆ ಬಡತನವೂ ಅವರನ್ನು ಬಾಧಿಸುತ್ತಿತ್ತು. ಪ್ರಭಾಸ್ ಸೇರಿದಂತೆ ಹಲವು ಸ್ಟಾರ್ ನಟರಿಗೆ ಡ್ಯಾನ್ಸ್ ಹೇಳಿಕೊಟ್ಟಿರುವ ರಾಕೇಶ್ ಕುಡಿತದ ದಾಸನಾದ ಕಾರಣದಿಂದಾಗಿ ಕಳೆದ ಕೆಲ ವರ್ಷಗಳಿಂದ ಸಿನಿಮಾಗಳಲ್ಲಿ ಕೆಲಸ ಸಿಕ್ಕಿರಲಿಲ್ಲ. ಇದೇ ಕಾರಣದಿಂದ ಕುಡಿತ ಇನ್ನೂ ಹೆಚ್ಚಿಸಿಕೊಂಡು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ತಂದುಕೊಂಡಿದ್ದರು.
ಕುಡಿದು ಯೂಟ್ಯೂಬ್ ಸಂದರ್ಶನಗಳನ್ನು ಸಹ ನೀಡಿದ್ದ ರಾಕೇಶ್, ತೆಲುಗು ಚಿತ್ರರಂಗದ ಗಣ್ಯ ನಟ-ನಟಿಯರ ವಿರುದ್ಧ ತೀರ ಕೀಳು ಹೇಳಿಕೆಗಳನ್ನು ಸಂದರ್ಶನಗಳಲ್ಲಿ ನೀಡಿದ್ದರು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳಿಗೆ ಗುರಿಯಾಗಿದ್ದರು. ಲೈವ್ ಸಂದರ್ಶನದಲ್ಲಿ ನಿರೂಪಕರನ್ನು ಅವಾಚ್ಯ ಶಬ್ದಗಳಿಂದ ಬೈಯ್ಯುವುದು, ಹೊಡೆಯುವುದು ಸಹ ಮಾಡಿದ್ದರು. ಕೆಲವು ನೃತ್ಯ ನಿರ್ದೇಶಕರುಗಳ ಹೆಸರು ಹೇಳಿ ಅವರಿಂದಲೇ ತಮ್ಮ ವೃತ್ತಿ ಜೀವನ ಹಾಳಾಯ್ತು ಎಂದು ಆರೋಪ ಮಾಡಿದ್ದರು.
ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನೃತ್ಯ ನಿರ್ದೇಶಕರಾಗಿರುವ ಶೇಖರ್ ಮಾಸ್ಟರ್, ಜಾನಿ ಮಾಸ್ಟರ್ ಅವರುಗಳಿಗೆ ತರಬೇತಿ ಕೊಟ್ಟ ರಾಕೇಶ್ ಮಾಸ್ಟರ್ ಇದೀಗ ಕುಡಿತದ ಚಟದಿಂದಾಗಿ ತಮ್ಮ ಜೀವನವನ್ನು ತಾವೇ ಕೈಯಾರೆ ಹಾಳು ಮಾಡಿಕೊಂಡಿದ್ದಾರೆ.