ಅಪ್ಪನ ಶವ ಬಿಸಾಕಿ ಎಂದ ಮಕ್ಕಳು: ಅನಾಥ ಶವವಾದ ನಿವೃತ್ತ ಬ್ಯಾಂಕ್ ಮ್ಯಾನೇಜರ್..!

ಚಿಕ್ಕೋಡಿ: ತಂದೆ ಅನಾರೋಗ್ಯದಿಂದ ಮೃತಪಟ್ಟರೂ ವಿದೇಶದಲ್ಲಿ ನೆಲೆಸಿರುವ ಮಕ್ಕಳು ಅಂತ್ಯಕ್ರಿಯೆಗೆ ಬಾರದೆ ಕೊನೆಗೆ ಪೊಲೀಸರೇ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ಮೂಲದ ಮೂಲಚಂದ್ರ ಶರ್ಮಾ (72) ಮೃತ ವೃದ್ಧ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಮೂಲಚಂದ್ರ ಶರ್ಮಾರನ್ನು ವ್ಯಕ್ತಿಯೊಬ್ಬರು ನಾಗರಮುನ್ನೋಳಿ ಕುಂಬಾರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೆರೆತಂದಿದ್ದರು.

ಆಸ್ಪತ್ರೆಯ ಹತ್ತಿರದಲ್ಲಿದ್ದ ಶಿವನೇರಿ ಲಾಡ್ಜ್ನಲ್ಲಿ ವೃದ್ಧನನ್ನು ಇರಿಸಿ, ಗುತ್ತಿಗೆ ಆಧಾರದಲ್ಲಿ ಮೂಲಚಂದ್ರ ಶರ್ಮಾರನ್ನು ಆರೈಕೆ ಮಾಡುತ್ತಿದ್ದರು. ತನ್ನ ಗುತ್ತಿಗೆ ವಾಯಿದೆ ಮುಗಿದ ಬಳಿಕ ವ್ಯಕ್ತಿ ವೃದ್ಧನನ್ನು ಲಾಡ್ಜ್ನಲ್ಲಿಯೇ ಬಿಟ್ಟು ತೆರಳಿದ್ದ. ಬಳಿಕ ಲಾಡ್ಜ್ ಮ್ಯಾನೇಜರ್ ವೃದ್ಧನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ವೃದ್ಧನನ್ನು ವಿಚಾರಿಸಿದಾಗ ತಾನು ನಿವೃತ್ತ ಬ್ಯಾಂಕ್ ಮ್ಯಾನೆಜರ್, ತನ್ನ ಮಗ ದಕ್ಷಿಣ ಆಫ್ರಿಕಾ ಹಾಗೂ ಮಗಳು ಕೆನಡಾದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ ಎಂದು ಮೂಲಚಂದ್ರ ಶರ್ಮಾ ತಿಳಿಸಿದ್ದಾರೆ. ಬಳಿಕ ವಿದೇಶದಲ್ಲಿರುವ ವೃದ್ಧನ ಮಕ್ಕಳ ಫೋನ್ ನಂಬರ್ ಪಡೆದು ಪೊಲೀಸರು ನಿರಂತರವಾಗಿ ಸಂಪರ್ಕಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಪೊಲೀಸರ ಕರೆಗೆ ಅವರಿಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬಳಿಕ ಮೂಲಚಂದ್ರ ಶರ್ಮಾರನ್ನು ಪೊಲೀಸರು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. 2 ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೂಲಚಂದ್ರ ಶರ್ಮಾ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿಸಲು ವಿದೇಶದಲ್ಲಿರುವ ಅವರ ಮಗಳಿಗೆ ಕರೆ ಮಾಡಿದಾಗ ನಮಗೂ ಅವರಿಗೂ ಸಂಬಂಧ ಇಲ್ಲ ಎಂದು ಹೇಳಿ ಕರೆಯನ್ನು ಕಟ್ ಮಾಡಿದ್ದಾರೆ. ಇದಾದ ಬಳಿಕ ಮರಣೋತ್ತರ ಪರೀಕ್ಷೆ ಮಾಡಿ ಚಿಕ್ಕೋಡಿ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಚಿಕ್ಕೋಡಿ ಪಿಎಸ್ಐ ಬಸಗೌಡ ನೇರ್ಲಿ, ನಾಗರಮುನ್ನೋಳಿ ಗ್ರಾ.ಪಂ. ಸಿಬ್ಬಂದಿ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆದಿದೆ. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಂತ್ಯಕ್ರಿಯೆ ಬಾರದ ಮಕ್ಕಳಿಗೆ ಹಿಡಿಶಾಪ ಹಾಕಿದ್ದಾರೆ.

Loading

Leave a Reply

Your email address will not be published. Required fields are marked *