ಬೆಂಗಳೂರು: ಬಿಜೆಪಿ ಟಿಕೆಟ್ ನೀಡುವುದು ಉದ್ಯಮಿಯೊಬ್ಬರಿಗೆ ವಂಚಿಸಿರುವ ಚೈತ್ರಾ ಕುಂದಾಪುರ ಅವರ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಹೊಸಪೇಟೆ ಸಂಸ್ಥಾನ ಮಠದ ಸ್ವಾಮೀಜಿಯಾದ ಅಭಿನವ ಹಾಲಶ್ರೀ ಅವರನ್ನು ಬೆಂಗಳೂರಿನ ಸ್ಥಳೀಯ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಸಿಸಿಬಿ ಪೊಲೀಸರಿಗೆ ಒಪ್ಪಿಸಿದೆ. ಇತ್ತೀಚೆಗೆ ಪ್ರಕರಣ ಹೊರಬಂದಾಗಿನಿಂದ ತಲೆಮರೆಸಿಕೊಂಡಿದ್ದ ಸ್ವಾಮೀಜಿ, ತಮ್ಮ ಮಠದಿಂದ ತಲೆಮರೆಸಿಕೊಂಡಿದ್ದರು. ವೇಷ ಬದಲಿಸಿಕೊಂಡು, ರಾಜ್ಯವನ್ನೇ ತೊರೆದು ಹೊರ ರಾಜ್ಯಗಳಲ್ಲಿ ಓಡಾಡುತ್ತಿದ್ದ ಸ್ವಾಮೀಜಿಯು ಇರುವುದನ್ನು ಕರಾರುವಾಕ್ ಆಗಿ ಗುರುತಿಸಿದ ಬೆಂಗಳೂರು ಪೊಲೀಸ್ ವಿಭಾಗದ ಅಪರಾಧ ನಿಗ್ರಹ ದಳ (ಸಿಸಿಬಿ) ಪೊಲೀಸರು, ಸೆ. 19ರ ರಾತ್ರಿ ಸ್ವಾನಮೀಜಿಯನ್ನು ಒಡಿಶಾದ ಕಟಕ್ ನಲ್ಲಿ ಸೆರೆ ಹಿಡಿಯುವಲ್ಲಿ ಸಫಲರಾಗಿದ್ದರು.
ಸೆರೆ ಹಿಡಿದ ನಂತರ, ಒಡಿಶಾದಲ್ಲಿ ಕೆಲವಾರು ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿಕೊಂಡ ಸಿಸಿಬಿ ಪೊಲೀಸರು ಆನಂತರ ಅಲ್ಲಿಂದ ಸ್ವಾಮೀಜಿಯನ್ನು ಬೆಂಗಳೂರಿಗೆ ಕರೆತಂದಿದ್ದರು. ಸೆ. 20ರಂದು ಬೆಳಗ್ಗೆ 19ನೇ ಎಸಿಎಂಎಂ ನ್ಯಾಯಾಲಯದ ಮಂದೆ ಹಾಜರುಪಡಿಸಿದ ಸಿಸಿಬಿ ಪೊಲೀಸರು, ಸ್ವಾಮೀಜಿಯವರ ಹೆಚ್ಚಿನ ವಿಚಾರಣೆ ನಡೆಸಬೇಕಿರುವುದರಿಂದ ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಸೆ. 29ರವರೆಗೆ (10 ದಿನ) ಸ್ವಾಮೀಜಿಯನ್ನು ಸಿಸಿಬಿ ಪೊಲೀಸರ ವಶಕ್ಕೆ ಕೊಟ್ಟಿದೆ.