25 ಸಾಧಕರಿಗೆ ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ ಪ್ರಶಸ್ತಿ

ಬೆಂಗಳೂರು;- ರಾಜಧಾನಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 25 ಸಾಧಕರಿಗೆ ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ ಪ್ರಶಸ್ತಿ ಲಭಿಸಿದೆ. ಇಂಟರಾಕ್ಟೀವ್ ಫೋರಮ್ ಆನ್ ಇಂಡಿಯನ್ ಎಕಾನಮಿಯಿಂದ ವಿಜ್ಞಾನಿ ಡಾ. ಸಿ.ಎನ್.ಆರ್.ರಾವ್, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಸೇರಿ ವಿವಿಧ ಕ್ಷೇತ್ರಗಳ 25 ಸಾಧಕರಿಗೆ ‘ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾರತ್ತಹಳ್ಳಿಯ ಹೊರ ವರ್ತಲ ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಮಂಗಳವಾರ ಕಲೆ, ವಿಜ್ಞಾನ, ತಂತ್ರಜ್ಞಾನ, ರಾಜಕೀಯ, ಸಿನಿಮಾ, ಸಮಾಜ ಸೇವೆ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳೂ ಆಗಿರುವ ಪ್ರಶಸ್ತಿ ಆಯ್ಕೆ ಸಮಿತಿ ಉಪಾಧ್ಯಕ್ಷ ಕೆ.ಜಿ. ಬಾಲಕೃಷ್ಣನ್ ಮತ್ತು ವೇದಿಕೆ ಅಧ್ಯಕ್ಷ ನ್ಯಾ. ಜ್ಞಾನ್ ಸುಧಾ ಮಿಶ್ರಾ ಅವರು ಗಣ್ಯರನ್ನು ಸನ್ಮಾನಿಸಿದರು.

ಪ್ರಶಸ್ತಿ ಪ್ರದಾನದ ಬಳಿಕ ಮಾತನಾಡಿದ ರಾಜ್ಯಪಾಲರು, ‘ಸರ್ವೆ ಭವಂತು ಸುಖಿನಃ ಸರ್ವೆ ಸಂತು ನಿರಾಮಯಾಃ’ ಎಂಬ ಮನೋಭಾವದಿಂದ ಮಾನವ ಸೇವೆ, ಸಮಾಜ ಸೇವೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಕೆಲಸ ಮಾಡುವವರೇ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಸ್ಥಾನ, ಪ್ರತಿಷ್ಠೆ ಅಥವಾ ದುರಾಸೆಯನ್ನು ಬಯಸದೆ. ಇತರರ ಹಿತಾಸಕ್ತಿಗಳನ್ನು ಗೌರವಿಸುವ ವ್ಯಕ್ತಿ ಉತ್ತಮ ಸಮಾಜ ನಿರ್ವಣಕ್ಕೆ ಸ್ಪೂರ್ತಿಯಾಗುತ್ತಾರೆ ಎಂದು ತಿಳಿಸಿದರು.

ದೇಶದಲ್ಲಿ ಅನೇಕ ಮಹಾನ್ ವ್ಯಕ್ತಿಗಳು ತಮ್ಮ ಸಂಪತ್ತು ಮತ್ತು ವೈಭವವನ್ನು ತ್ಯಾಗ ಮಾಡಿದ್ದಾರೆ. ದೇಶ, ಸಮಾಜದ ಕಲ್ಯಾಣ, ಧರ್ಮ ಮತ್ತು ಸಂಸ್ಕೃತಿಯನ್ನು ಬಲಪಡಿಸಲು ಸೇವೆ ಮಾಡುತ್ತಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳಿಂದ ಪ್ರೇರಣೆ ಪಡೆದು ಮಾನವ ಸೇವೆ, ಸಮಾಜ ಸೇವೆ ಮತ್ತು ದೇಶ ಸೇವೆಯ ಕೆಲಸವನ್ನು ಪರೋಪಕಾರದ ಮನೋಭಾವದಿಂದ ಮಾಡಬೇಕು ಎಂದು ಕರೆ ನೀಡಿದರು.

ಬದಲಾವಣೆಯು ಪ್ರಕೃತಿಯ ನಿಯಮವಾಗಿದೆ ಮತ್ತು ಸಕಾರಾತ್ಮಕ ಬೆಳವಣಿಗೆಗಾಗಿ ಬದಲಾವಣೆಯು ಸಂಭವಿಸುತ್ತಲೇ ಇರಬೇಕು. ತಮ್ಮ ಪ್ರಯತ್ನದ ಮೂಲಕ ಸಮಾಜದಲ್ಲಿ ಮಹತ್ವದ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾದ ಕರ್ನಾಟಕದ ಮಹಾನ್ ವ್ಯಕ್ತಿಗಳನ್ನು ಗೌರವಿಸುವ ಅವಕಾಶ ನನಗೆ ಸಿಕ್ಕಿದೆ. ಸಮಾಜ, ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವುದನ್ನು ಮುಂದುವರೆಸಬೇಕು ಎಂದು ಆಶಿಸುತ್ತೇನೆ ಎಂದರು.

Loading

Leave a Reply

Your email address will not be published. Required fields are marked *