ಕೊಪ್ಪಳ: ಬಿಜೆಪಿ ಎಂಎಲ್ಎ ಸೀಟ್ ಕೊಡಿಸುವುದಾಗಿ ಕೋಟ್ಯಾಂತರ ರುಪಾಯಿ ವಂಚಿಸಿ ಬಂಧನವಾಗಿರುವ ಚೈತ್ರಾ ಕುಂದಾಪುರ ಬಗ್ಗೆ ಸಚಿವ ಶಿವರಾಜ ತಂಗಡಗಿ ಮಾತನಾಡಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತೆ, ಚೈತ್ರಾ ಕುಂದಾಪುರ ಹಾಗೂ ಚಕ್ರವರ್ತಿ ಸೂಲಿಬೇಲಿ ಅಣ್ಣ ತಂಗಿ ಎಂದು ಟೀಕಿಸಿದ್ದಾರೆ. ಅವರು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಎಲ್ಲಾ ಸೀಟುಗಳು ಮಾರಾಟವಾಗಿವೆ. ಬಿಜೆಪಿಯಲ್ಲಿ ಎಂಪಿ ಟಿಕೆಟ್ ಇದೇ ರೀತಿ ಸೇಲ್ ಆಗಬಹುದು. 5 ಕೋಟಿ ಎಂಎಲ್ ಎ, 10 ಕೋಟಿ ಲೋಕಸಭಾ ಕ್ಷೇತಕ್ಕೆ, 80 ಕೋಟಿ ಸಚಿವರಿಗೆ ಹಾಗೂ 2500 ಕೋಟಿ ಮುಖ್ಯಮಂತ್ರಿ ಸೇಲ್ ಆಗಬಹುದು ಎಂದರು.
ಬಿಜೆಪಿಯೊಳಗೆ ಸಿಎಂ ಸೇರಿ ಎಲ್ಲಾ ಸ್ಥಾನಗಳು ಸೇಲ್ ಆಗಿವೆ. ಇದೇ ವೇಳೆ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಇನ್ನೂ ಟೆಂಡರ್ ಆಗಿಲ್ಲ, ಈಗ ಟೆಂಡರ್ ಕರೆದಿದ್ದಾರೆ. ಟೆಂಡರ್ ಜೆಡಿಎಸ್ ನವರು ಬಂದು ಕೂಗಬಹುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಕಾಂಗ್ರೆಸ್ನಲ್ಲಿ ಡಿಸಿಎಂ ಹುದ್ದೆಯ ಬಗ್ಗೆ ಕೆ ಎನ್ ರಾಜಣ್ಣ ಹೇಳಿದ್ದರ ಬಗ್ಗೆ ನೋ ಕಾಮೆಂಟ್ ಎಂದರು. ರಾಜಣ್ಣ ಹೇಳಿರುವುದಕ್ಕೆ ಹೈ ಕಮಾಂಡ್ ನಿರ್ಧರಿಸುತ್ತದೆ ಎಂದರು. ಜೆಡಿಎಸ್ ನೊಂದಿಗೆ ಬಿಜೆಪಿ ಹೊಂದಾಣಿಕೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಲಾಭವಾಗುತ್ತದೆ. ಜೆಡಿಎಸ್ ಹಾಗು ಬಿಜೆಪಿ ಹೊಂದಾಣಿಕೆಯಿಂದ ನಮಗೆ ಲಾಭವಿಲ್ಲ. ನಷ್ಟವಿಲ್ಲ ಎಂದರು. ಡಿಸೆಂಬರ್ನೊಳಗೆ ಮಳೆಯಾಗುವ ನಿರೀಕ್ಷೆ ಇದೆ. ಡಿಸೆಂಬರ್ ನಂತರ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗುವುದು ಎಂದರು.