`CET ಪರೀಕ್ಷೆ’ : 2 ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರ ತಲುಪಲು ವಿದ್ಯಾರ್ಥಿಗಳಿಗೆ ಸೂಚನೆ

ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಇಂದು ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸಮಾರಂಭ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಸುತ್ತಮುತ್ತಲಿನ ಕಾಲೇಜುಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ.

 

ಮುಖ್ಯವಾಗಿ, ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಸಮೀಪದಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವವರು ಬೆಳಿಗ್ಗೆ 8.30ರ ಹೊತ್ತಿಗೆ ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಧ್ಯಾಹ್ನ ನಡೆಯಲಿರುವ ಗಣಿತದ ಪರೀಕ್ಷೆ ಮಾತ್ರ ಬರೆಯುತ್ತಿರುವವರು ಸಹ ಪರೀಕ್ಷಾ ಕೇಂದ್ರಗಳನ್ನು ಬೆಳಿಗ್ಗೆಯೇ ತಲುಪುವುದು ಒಳ್ಳೆಯದು. ಏಕೆಂದರೆ, ಪ್ರಮಾಣವಚನ ಸಮಾರಂಭದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಂಭವವಿದೆ ಎಂದಿದ್ದಾರೆ.

ಒಂದು ವೇಳೆ ಅಭ್ಯರ್ಥಿಗಳು ಸಂಚಾರ ದಟ್ಟಣೆಗೆ ಸಿಲುಕಿಕೊಂಡಲ್ಲಿ ಪರೀಕ್ಷಾ ಪ್ರವೇಶಪತ್ರವನ್ನು ಪೊಲೀಸರಿಗೆ ತೋರಿಸಿದರೆ ಅಂತಹವರನ್ನು ಆದಷ್ಟು ಬೇಗ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಿಕೊಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Loading

Leave a Reply

Your email address will not be published. Required fields are marked *