ಚಾಮರಾಜನಗರ;- ಸಚಿವ ವೆಂಕಟೇಶ್ ಅವರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.ಈ ಸಂಬಂಧ ಮಾತನಾಡಿದ ಅವರು,ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕದ ಮೇಲೆ ದ್ವೇಷ ಇಟ್ಟುಕೊಂಡಿದೆ. ಯಾವಾಗಲೂ ತಮಿಳುನಾಡಿಗೆ ನೀರು ಬಿಡಿ ಎಂದು ಹೇಳುತ್ತಿದೆ. ಪ್ರಾಧಿಕಾರ ನಮ್ಮ ಅಫೀಲ್ ಕೇಳುತ್ತಲೇ ಇಲ್ಲ. ಪ್ರಾಧಿಕಾರ ನಮ್ಮ ಪರ ಇಲ್ಲ ಅಂತಾ ನನಗೆ ಅನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲಿಂದಲೂ ಸಹ ಪ್ರಾಧಿಕಾರ ನಮ್ಮ ಪರ ನಿಂತಿಲ್ಲ, ಇದನ್ನೆಲ್ಲ ನೋಡಿದರೆ ಕರ್ನಾಟಕದ ಮೇಲೆ ಪ್ರಾಧಿಕಾರ ದ್ವೇಷ ಸಾಧಿಸುತ್ತಿದೆ ಎನಿಸುತ್ತದೆ. ನಮಗೆ ನೀರಿಲ್ಲ, ಇನ್ನೂ ತಮಿಳುನಾಡಿಗೆ ಎಲ್ಲಿಂದ ನೀರು ಬಿಡುವುದು. ಸಿಎಂ ಕೂಡ ಅದನ್ನೇ ಹೇಳಿದ್ದಾರೆ. ನಮ್ಮ ರೈತರನ್ನು ಬಲಿ ಕೊಡಲ್ಲ ಅಂತ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.
ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ಸಿಹಿ ಕೊಟ್ಟು, ಕರ್ನಾಟಕದ ಪಾಲಿಗೆ ಕಹಿ ಕೊಟ್ಟು ಅನ್ಯಾಯ ಮಾಡಿದೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದರು. ಕನ್ನಡ ರಾಜ್ಯೋತ್ಸವ ಸುವರ್ಣ ಮಹೋತ್ಸವದ ಸಿಹಿ ಒಂದೆಡೆಯಾದರೆ, ತಮಿಳುನಾಡಿಗೆ ನೀರು ಹರಿಯುತ್ತಿರುವುದು ಕನ್ನಡಿಗರ ಪಾಲಿಗೆ ಕಹಿಯಾಗಿದೆ ಎಂದು ಕಿಡಿಕಾರಿದರು.