ಉಳ್ಳಾಲ: ಕಾರು ಚಾಲಕನೋರ್ವ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಲಾರಿ ಗುದ್ದಿ, ಅದರ ಹಿಂಭಾಗಕ್ಕೆ ವ್ಯಾಗನಾರ್ ಕಾರು ಗುದ್ದಿ, ಅದಕ್ಕೆ ಬಸ್ಸು ಗುದ್ದಿದ ಪರಿಣಾಮ ಸರಣಿ ಅಪಘಾತ ಸಂಭವಿಸಿ ಹಲವರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ರಾ.ಹೆ. 66ರ ಜೆಪ್ಪುವಿನ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಮೀಪದಲ್ಲೇ ಸಂಭವಿಸಿದೆ.
ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸಿಯಾಝ್ ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದ್ದಾರೆ. ಪರಿಣಾಮ ಹಿಂಬದಿಯಲ್ಲಿದ್ದ ಲಾರಿ ಸಿಯಾಝ್ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಅದೇ ವೇಳೆ ಲಾರಿ ಹಿಂಭಾಗದಲ್ಲಿದ್ದ ವ್ಯಾಗನಾರ್ ಕಾರು ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆಯುವ ಸಂದರ್ಭವೇ ಅದರ ಹಿಂಭಾಗದಲ್ಲಿದ್ದ ಕೇರಳ ಸಾರಿಗೆ ಬಸ್ಸು ವ್ಯಾಗನಾರ್ ಕಾರಿಗೆ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಲಾರಿ ಹಾಗೂ ಬಸ್ ನಡುವೆ ಸಿಲುಕಿದ ವ್ಯಾಗನಾರ್ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಅಪ್ಪಚ್ಚಿಯಾಗಿದೆ. ಉಳಿದ ವಾಹನಗಳ ಹಿಂಭಾಗಕ್ಕೆ ಹಾನಿಯಾಗಿದೆ. ವ್ಯಾಗನಾರ್ ಕಾರಿನ ಲ್ಲಿ ಚಾಲಕ ಮಾತ್ರ ಇದ್ದು, ಆತ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಎಲ್ಲಾ ವಾಹನಗಳಲ್ಲಿದ್ದ ಐದು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.