ಬೆಂಗಳೂರು: ಬಿಜೆಪಿ (BJP) ಅವರು ಬರ ವಿಚಾರಕ್ಕೆ ಸಿದ್ದರಾಮಯ್ಯ ಫೋಟೋ ಹಾಕುವ ಬದಲು ಮೋದಿ (Narendra Modi) ಬಳಿ ಹೋಗಿ ಬರ (Draught) ಪರಿಹಾರ ಕೇಳಲಿ ಅಂತ ಕೃಷಿ ಸಚಿವ ಚೆಲುವರಾಯಸ್ವಾಮಿ (Chaluvarayaswamy) ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಸಿದ್ದರಾಮಯ್ಯ ಭಾವಚಿತ್ರದಲ್ಲಿ ಬರ ಮೂಡಿಸಿರುವ ಬಿಜೆಪಿ ಟ್ವೀಟ್ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರಿಗೆ ಭಯ ಬಂದಿದೆ. ಪಾರ್ಲಿಮೆಂಟ್ ಚುನಾವಣೆ ಎದುರಿಸಲು ಆಗುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಿದ್ದಾರೆ. ಬರಗಾಲ ಯಾರಾದರೂ ಹೇಳಿ ಕೇಳಿ ಕರೆಯಲು ಸಾಧ್ಯವಾ? ಸಂಸ್ಕಾರವಿಲ್ಲದೆ ಮಾತಾಡ್ತಿದ್ದಾರೆ ಅಂತ ಕಿಡಿಕಾರಿದರು.
ಮೋದಿ ಅವರು ರಾಜ್ಯಕ್ಕೆ ಬಂದಾಗ ವಿಶ್ ಮಾಡದೆ ಹೋಗಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಮಾತಾಡಿದ್ರೆ ನಮ್ಮನ್ನ ದೆಹಲಿಗೆ ಕರೆಯುತ್ತಾರೆ ಎಂದುಕೊಂಡಿದ್ದಾರೆ. ನಾಲ್ಕು ತಿಂಗಳಾದ್ರೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಜೆಡಿಎಸ್ ಜೊತೆ ಹೋಗ್ತಿದ್ದಾರೆ ಅಂತ ಟೀಕಿಸಿದರು. ಸಿದ್ದರಾಮಯ್ಯ ಗ್ಯಾರಂಟಿಗಳಿಗೆ ಅಲೋಕೇಷನ್ ಕೊಡ್ತಿದ್ದಾರೆ. ಅದರ ಜೊತೆ ಬೇರೆ ಕೆಲಸಗಳೂ ನಡೆಯುತ್ತಿದೆ.196 ತಾಲೂಕು ಬರ ಅಂತ ಘೋಷಣೆ ಮಾಡಲಾಗಿದೆ. 34 ತಾಲೂಕು ಮಾರ್ಗಸೂಚಿ ವ್ಯಾಪ್ತಿ ಒಳಗಡೆ ಬರುತ್ತಿಲ್ಲ. ಅದನ್ನು ಮಾರ್ಗಸೂಚಿಯ ಒಳಗಡೆ ತಂದು ಬರ ಎಂದು ಘೋಷಣೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ರೈತರಿಗೆ ಐದು ಲಕ್ಷ ರೂ. ಬಡ್ಡಿ ರಹಿತ ಸಾಲ ಕೊಡ್ತಿದ್ದೇವೆ. ಹಾಲು ದರ ಏರಿಸಿ ರೈತರಿಗೆ ಕೊಡಲಾಗ್ತಿದೆ.ಇದನ್ನೆಲ್ಲಾ ಸಿದ್ದರಾಮಯ್ಯ ತಾನೆ ಮಾಡಿದ್ದು ಅಂತ ಬಿಜೆಪಿಗೆ ಸಚಿವ ಚೆಲುವರಾಯಸ್ವಾಮಿ ತಿರುಗೇಟು ಕೊಟ್ಟರು.