ರೋಮ್: ಇಟಾಲಿಯನ್ (Italy) ನಗರದ ವೆನಿಸ್ ಬಳಿಯ ಮೇಲ್ಸೇತುವೆಯಿಂದ (Venice Bridge) ಬಸ್ ಕೆಳಗೆ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. ಸೇತುವೆಯ ಮೂಲಕ ವೆನಿಸ್‌ಗೆ ಸಂಪರ್ಕ ಕಲ್ಪಿಸುವ ಮೆಸ್ಟ್ರೆ ಜಿಲ್ಲೆಯ ರೈಲ್ವೆ ಹಳಿಗಳ ಬಳಿ ತಡೆಗೋಡೆ ಮುರಿದು ಬಸ್ ಪಲ್ಟಿಯಾಗಿದೆ.
ದುರಂತದಲ್ಲಿ ಮೃತಪಟ್ಟವರ ಪೈಕಿ ಐವರು ಉಕ್ರೇನಿಯನ್ನರು, ಒಬ್ಬ ಜರ್ಮನ್ ಮತ್ತು ಇಟಾಲಿಯನ್ ಚಾಲಕ ಸೇರಿದ್ದಾರೆ. ವೆನಿಸ್ ಮತ್ತು ಹತ್ತಿರದ ಮಾರ್ಗೇರಾ ಜಿಲ್ಲೆಯ ಕ್ಯಾಂಪ್‌ಸೈಟ್ ನಡುವೆ ಪ್ರವಾಸಿಗರನ್ನು ಬಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ರಾತ್ರಿ 7:45 ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ದುರಂತಕ್ಕೆ ವೆನಿಸ್ ಮೇಯರ್ ಲುಯಿಗಿ ಬ್ರುಗ್ನಾರೊ ವಿಷಾದ ವ್ಯಕ್ತಪಡಿಸಿದ್ದಾರೆ.
ಬಸ್ ಮಿಥೇನ್ ಅನಿಲದಿಂದ ಚಾಲಿತವಾಗಿದೆ. ಮೇಲ್ಸೇತುವೆಯಿಂದ ವಿದ್ಯುತ್ ತಂತಿಗಳ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಆಂತರಿಕ ಸಚಿವ ಮ್ಯಾಟಿಯೊ ಪಿಯಾಂಟೆಡೋಸಿ ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಕರ್ತರು ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕನಿಷ್ಠ 18 ಜನರು ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.