ಅಭಿವೃದ್ಧಿ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್‌: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ

ಬೆಂಗಳೂರು, ಫೆಬ್ರವರಿ 16, ಶುಕ್ರವಾರ ಆರ್ಥಿಕ ತಜ್ಞ ಎಂದು ಕೊಚ್ಚಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ‘ಅಡ್ಡಕಸುಬಿ ಬಜೆಟ್‌ʼ ಮಂಡಿಸಿದ್ದು, ಇದರಲ್ಲಿ ಅರ್ಥಶಾಸ್ತ್ರ, ಅಭಿವೃದ್ಧಿ, ದೂರದೃಷ್ಟಿ ಯಾವುದೂ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಕಟುವಾಗಿ ಟೀಕಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಬಜೆಟ್‌ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ಬಜೆಟ್ ತಯಾರಿಕೆ ಎನ್ನುವುದು ಗಂಭೀರ ಹಾಗೂ ಪವಿತ್ರವಾದ ಸಾಂವಿಧಾನಿಕ ಕರ್ತವ್ಯ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ನೋಡಿದರೆ ಇದೊಂದು ‘ಅಡ್ಡಕಸುಬಿʼ ಬಜೆಟ್‌ನಂತೆ ಕಾಣುತ್ತಿದೆ. ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಅಭಿವೃದ್ಧಿಯೂ ಇಲ್ಲ, ದೂರದೃಷ್ಟಿಯೂ ಇಲ್ಲ ಎಂದು ಹೇಳಿದ್ದಾರೆ.

ಸಾಧನೆಯ ಬಲದಿಂದಾಗಲೀ, ಅಭಿವೃದ್ಧಿ ಕೆಲಸಗಳಿಂದಾಗಲೀ, ಲೋಕಸಭೆ ಚುನಾವಣೆ ಎದುರಿಸುವುದು ಅಸಾಧ್ಯವೆಂದು ತಿಳಿದಿರುವ ಸಿಎಂ ಸಿದ್ದರಾಮಯ್ಯನವರು ಬಜೆಟ್ ಮಂಡನೆಯ ಪವಿತ್ರ ಸಾಂವಿಧಾನಿಕ ಕರ್ತವ್ಯವನ್ನು ಚುನಾವಣಾ ಭಾಷಣವಾಗಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಸಂವಿಧಾನಕ್ಕೆ ಮತ್ತು ಮತ ನೀಡಿ ಅಧಿಕಾರ ಕೊಟ್ಟ ಕನ್ನಡಿಗರಿಗೆ ಅಪಮಾನ ಎಸಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಲಾ 44,000 ರೂ. ಸಾಲಭಾಗ್ಯ

ತಮ್ಮ ಮೊದಲ ಅವಧಿಯಲ್ಲಿ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ಮಾಡಿ ಪ್ರತಿ ಪ್ರಜೆಯ ತಲೆಯ ಮೇಲೆ 44,000 ರೂ. ಗೂ ಅಧಿಕ ಸಾಲದ ಹೊರೆ ಹೇರಿದ್ದು ಮುಖ್ಯಮಂತ್ರಿ ಸಿದ್ದರಾಮ್ಯಯನವರ ದೊಡ್ಡ ಸಾಧನೆ. ಆ ಭಾಗ್ಯ, ಈ ಭಾಗ್ಯ ಎಂದು ರಾಜ್ಯದ ಜನತೆಯ ಮೇಲೆ ʼಸಾಲ ಭಾಗ್ಯʼ ಹೊರಿಸಿ, ಹಳಿ ತಪ್ಪಿದ್ದ ವಿತ್ತೀಯ ಶಿಸ್ತನ್ನು ನಂತರ ಬಂದ ಬಿಜೆಪಿ ಸರ್ಕಾರ ಕೋವಿಡ್ ಸಂಕಷ್ಟದ ಹೊರತಾಗಿಯೂ ಸರಿ ದಾರಿಗೆ ತಂದಿತ್ತು. ಆದರೆ ಈಗ ಎರಡನೇ ಅವಧಿಯಲ್ಲೂ ಸಿಎಂ ಸಿದ್ದರಾಮಯ್ಯನವರು ಕರ್ನಾಟಕವನ್ನು ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿಸಲು ಹೊರಟಿದ್ದಾರೆ. “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬುದು ಈ ಸರ್ಕಾರದಲ್ಲಿ “ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ” ಎಂಬಂತಾಗಿದೆ ಎಂದರು.

ಕೇಂದ್ರದ ಮೇಲೆ ಆರೋಪ: ಬಜೆಟ್‌ ಪುಸ್ತಕದಲ್ಲಿ ಸುಳ್ಳುಗಳು

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ದ್ವೇಷ ಭಾಷಣವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಸಂಪತ್ತಿನ ಶೇಖರಣೆ, ಅಸಮಾನತೆ ಎಂಬ ಹಳೆಯ ವಾದವನ್ನೇ ಜನರ ಮುಂದಿಟ್ಟಿದ್ದಾರೆ. ಹೀಗೆ ಹೇಳುತ್ತಲೇ ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂ. ಅನ್ನು ಬೇರೆ ಯೋಜನೆಗಳಿಗೆ ಬಳಸಿದ್ದಾರೆ. ಬೊಕ್ಕಸದಲ್ಲಿ ಹಣವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಪರೋಕ್ಷವಾಗಿ ಹೇಳಿದ್ದು, ಹಾಗೆನೂ ಇಲ್ಲ ಎಂದು ಬಜೆಟ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

15 ನೇ ಹಣಕಾಸು ಯೋಜನೆಯಡಿ ವಿಶೇಷ ಅನುದಾನ ಎಂಬ ಹಸಿ ಸುಳ್ಳನ್ನು ಬಜೆಟ್‌ ಪುಸ್ತಕದಲ್ಲಿ ಸೇರಿಸಿದ್ದಾರೆ. ಈ ರೀತಿಯ ಶಿಫಾರಸನ್ನು ಮಾಡಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಅಲ್ಲದೆ ರಾಜ್ಯಕ್ಕೆ ಎಷ್ಟು ನಷ್ಟವಾಗಿದೆ ಎಂಬ ಹೊಸ ತಲೆ ಬುಡವಿಲ್ಲದ ಲೆಕ್ಕವನ್ನು ನೀಡಿದ್ದಾರೆ. 2004-2014 ರ ಅವಧಿಯಲ್ಲಿ ಯುಪಿಎ ನೀಡಿದ್ದು 81,795 ಕೋಟಿ ರೂ. 2014-2024 ರ ಅವಧಿಯಲ್ಲಿ ಮೋದಿ ಸರ್ಕಾರ ನೀಡಿರುವುದು 2,82,791 ಕೋಟಿ ರೂ. ಅಂದರೆ ಈ ಪ್ರಮಾಣ 242% ಕ್ಕೂ ಅಧಿಕ ಎಂದು ಆರ್.ಅಶೋಕ ಸತ್ಯಾಂಶವನ್ನು ವಿವರಿಸಿದ್ದಾರೆ.

ಗ್ಯಾರಂಟಿ ಯೋಜನೆಯಿಂದ ಜನರ ಆದಾಯ ಹೆಚ್ಚಿದೆ ಎಂದಿದ್ದಾರೆ. ಒಂದು ಕಡೆ ವಿದ್ಯುತ್‌ ದರ ಏರಿಕೆ, ರೈತರ ಪಂಪ್‌ಸೆಟ್‌ಗೆ ವಿದ್ಯುತ್‌ ಕಡಿತ, ಕಿಸಾನ್‌ ಸಮ್ಮಾನ್‌ ನಿಧಿ ಸ್ಥಗಿತ, ವಿದ್ಯಾನಿಧಿ ಸ್ಥಗಿತ, ಹೈನುಗಾರರಿಗೆ ಹಾಲಿನ ಪ್ರೋತ್ಸಾಹಧನ ಸ್ಥಗಿತ, ಮುದ್ರಾಂಕ ಶುಲ್ಕ ದರ ಏರಿಕೆ ಮೊದಲಾದವುಗಳ ಮೂಲಕ ಜನರಿಗೆ ದರ ಏರಿಕೆಗಳ ಬರೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

Loading

Leave a Reply

Your email address will not be published. Required fields are marked *