ನವದೆಹಲಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಭಾನುವಾರ ಪತ್ನಿ ಅಕ್ಷತಾ ಮೂರ್ತಿಯವರೊಂದಿಗೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ರಿಷಿ ಸುನಕ್ ದಂಪತಿ ನವದೆಹಲಿಗೆ (New Delhi) ಆಗಮಿಸಿದ್ದು, ಕೆಲ ವಿಶ್ವ ನಾಯಕರ ಜೊತೆಗೆ ವಿಶ್ವದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಬ್ರಿಟನ್ ಪ್ರಧಾನಿಯಾದ ಬಳಿಕ ರಿಷಿ ಸುನಕ್ ಅವರು ಮೊದಲ ಬಾರಿಗೆ ಭಾರತಕ್ಕೆ ಅಧಿಕೃತವಾಗಿ ಭೇಟಿ ನೀಡಿದ್ದಾರೆ. ಅಕ್ಷರಧಾಮ ದೇವಾಲಯಕ್ಕೆ ಆಗಮಿಸಿದ ಹಿನ್ನೆಲೆ ದೇವಸ್ಥಾನದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೆಹಲಿಗೆ ಆಗಮಿಸಿದ ಸಂದರ್ಭ ರಿಷಿ ಸುನಕ್ ನಾನೊಬ್ಬ ಹೆಮ್ಮೆಯ ಹಿಂದೂ ಎಂದು ಹೇಳಿದ್ದರು. ಅಲ್ಲದೇ ಹಲವು ದೇವಸ್ಥಾನಕ್ಕೆ ಭೇಟಿ ನೀಡುವುದಾಗಿಯೂ ತಿಳಿಸಿದ್ದರು.
ಇಷ್ಟು ಮಾತ್ರವಲ್ಲದೇ ತಾವು ದೆಹಲಿಯಲ್ಲಿ ಆಗಾಗ ಭೇಟಿ ನೀಡುತ್ತಿದ್ದ ಕೆಲವು ರೆಸ್ಟೋರೆಂಟ್ಗಳಿಗೆ ಭೇಟಿ ನೀಡಲು ಯೋಜನೆ ಹಾಕಿಕೊಂಡಿರುವುದಾಗಿ ಮಾಹಿತಿ ನೀಡಿದ್ದರು. ಸೆಪ್ಟೆಂಬರ್ 9ರಂದು ನಡೆದ ಜಿ20 ಶೃಂಗಸಭೆಯಲ್ಲಿ ಸುನಕ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ವ್ಯಾಪಾರ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಹೂಡಿಕೆಯನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು.