ದಿಸ್ಪುರ್: ಅಸ್ಸಾಂನ (Assam) ಸಿಲ್ಚಾರ್ನಲ್ಲಿರುವ ಬಿಜೆಪಿ ಸಂಸದ (BJP MP) ರಾಜ್ ದೀಪ್ ರಾಯ್ (Rajdeep Roy) ಅವರ ನಿವಾಸದಲ್ಲಿ ಶನಿವಾರ 10 ವರ್ಷದ ಬಾಲಕನ (Boy) ಶವ ಪತ್ತೆಯಾಗಿದೆ. ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯ (Suicide) ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ತಾಯಿ ರಾಜ್ದೀಪ್ ಅವರ ಮನೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರು ಮೂಲತಃ ಧೋಲೈ ಪ್ರದೇಶದವರಾಗಿದ್ದು, ಇಬ್ಬರು ಮಕ್ಕಳೊಂದಿಗೆ ತಮ್ಮ ನಿವಾಸದಲ್ಲಿ ವಾಸಗಿದ್ದರು. ಬಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಗ ತಕ್ಷಣವೇ ರಾಜ್ದೀಪ್ ರಾಯ್ಗೆ ಈ ಬಗ್ಗೆ ತಿಳಿಸಲಾಗಿತ್ತು. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಸಂಸದರು ತಿಳಿಸಿದ್ದಾರೆ.
ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ಸಿಲ್ಚಾರ್ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದಾರೆ. ಈ ಘಟನೆಯನ್ನು ಆತ್ಮಹತ್ಯೆ ಎನ್ನಲಾಗಿದೆ. ಈ ಘಟನೆ ನಡೆದ ಸಂದರ್ಭ ನಾನು ಪಕ್ಷದ ಕಚೇರಿಯಲ್ಲಿದ್ದೆ. ವಿಷಯ ತಿಳಿದು ತಕ್ಷಣ ನಿವಾಸಕ್ಕೆ ಆಗಮಿಸಿದೆ. ಆಗ ಬಾಲಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಎಂದು ರಾಜ್ದೀಪ್ ರಾಯ್ ಹೇಳಿದ್ದಾರೆ. ಬಾಲಕನ ಕುಟುಂಬ ನಮ್ಮ ನಿವಾಸದ ಮೊದಲ ಮಹಡಿಯಲ್ಲಿ ವಾಸವಾಗಿತ್ತು. ಬಾಲಕ ಉತ್ತಮ ನಡತೆಯನ್ನು ಹೊಂದಿದ್ದ. ನಾನು ಆತನನ್ನು ಶಾಲೆಗೂ ಸೇರಿಸಿದ್ದೆ. ಆತನ ತಾಯಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.