ಬೆಂಗಳೂರು:- ರಾಜಭವನಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ರಾಷ್ಟ್ರೀಯ ತನಿಖಾ ದಳದ ದೊಮ್ಮಲೂರಿನ ನಿಯಂತ್ರಣ ಕೊಠಡಿಗೆ ಸೋಮವಾರ ರಾತ್ರಿ 11.30ರ ಸುಮಾರಿಗೆ ಕರೆ ಮಾಡಿದ್ದ ಆರೋಪಿ, ರಾಜಭವನದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಸಿದ್ದ. ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳೀಯ ಪೊಲೀಸರು ರಾಜಭವನಕ್ಕೆ ಭೇಟಿ ನೀಡಿ ರಾತ್ರಿಯಿಡೀ ಶೋಧ ನಡೆಸಿದ್ದರು. ಇದೊಂದು ಹುಸಿ ಬೆದರಿಕೆಯೆಂದು ಘೋಷಿಸಿದ್ದರು.
ಬೆದರಿಕೆ ಕರೆ ಮಾಡಿದ್ದ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಯೊಬ್ಬನನ್ನು ಗುರುತಿಸಲಾಗಿದೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಯಾವ ಕಾರಣಕ್ಕೆ ಕರೆ ಮಾಡಿದ್ದನೆಂಬುದು ಗೊತ್ತಾಗಿಲ್ಲ. ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.