ಬೆಂಗಳೂರು : ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನರು ತತ್ತರಿಸಿದ್ದು, ಬೆಂಗಳೂರಿನಲ್ಲಿ ಸುರಿದ ಮಹಾಮಳೆಗೆ ಮತ್ತೊಂದು ಬಲಿಯಾಗಿದೆ. ಮಳೆಯಿಂದಾಗಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಭಾನುವಾರ ಸಂಜೆ ಸುರಿದ ಮಳೆಯ ಅಬ್ಬರಕ್ಕೆ ಮತ್ತೊಂದು ಬಲಿಯಾಗಿದೆ.
ಕೆಪಿ ಅಗ್ರಹಾರದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದೆ. ಮೃತ ಯುವಕನನ್ನು ಲೋಕೇಶ್ (31) ಎಂದು ಗುರುತಿಸಲಾಗಿದೆ.
ಲೋಕೇಶ್ ನಿನ್ನೆ ಕೆಪಿ ಅಗ್ರಹಾರದ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ. ಬಳಿಕ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಇಂದು ಬ್ಯಾಟರಾಯನಪುರ ರಾಜಕಾಲುವೆ ಬಳಿ ಲೋಕೇಶ್ ಶವ ಪತ್ತೆಯಾಗಿದೆ. ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಳೆಯಿಂದಾಗಿ ( Rain in Bengaluru ) ಬಹುದೊಡ್ಡ ಅವಾಂತರವೇ ಸೃಷ್ಠಿಯಾಗಿತ್ತು. ಕೆ ಆರ್ ಸರ್ಕಲ್ ಬಳಿಯ ಅಂಡರ್ ಪಾಸ್ ನಲ್ಲಿ ಕಾರು ಸಿಲುಕಿತ್ತು. ಆರು ಮಂದಿಯಲ್ಲಿ ಐವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು. ಆದ್ರೇ ಓರ್ವ ಯುವತಿ ಮಾತ್ರ ನೀರಿನಲ್ಲಿ ಉಸಿರುಗಟ್ಟಿ ತೀವ್ರವಾಗಿ ಅಸ್ವಸ್ಥಗೊಂಡು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಬೆಂಗಳೂರಿನ ಇನ್ಫೋಸಿಸ್ ಉದ್ಯೋಗಿಯಾಗಿದ್ದಂತ ಭಾನುರೇಖಾ ಎಂಬಾಕೆಯೇ ಮೃತ ದುರ್ದೈವಿಯಾಗಿದ್ದಳು. ಇದೀಗ ಬೆಂಗಳೂರಿನಲ್ಲಿ ಸುರಿದ ಮಹಾಮಳೆಗೆ ಮತ್ತೊಂದು ಬಲಿಯಾಗಿದೆ.