ಬೆಂಗಳೂರು;- ರಾಜ್ಯ ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿ, ಶಕ್ತಿ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಬಿಜೆಪಿ ಮಾತು ಅತೃಪ್ತ ಆತ್ಮಗಳ ವ್ಯರ್ಥ ಪ್ರಲಾಪದಂತಿದೆ ಎಂದು ವ್ಯಂಗ್ಯವಾಡಿದೆ5 ತಿಂಗಳಾದರೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ ಬಿಜೆಪಿಗೆ ಸರ್ಕಾರವನ್ನು ಹೇಗೆ ವಿರೋಧಿಸಬೇಕು, ಟೀಕಿಸಬೇಕು ಎಂದು ತಿಳಿಯದೆ ಅಕ್ಷರಶಃ ಮತಿಭ್ರಮಣೆಯಾದಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಹರಿಹಾಯ್ದಿದೆ. ಶಕ್ತಿ ಯೋಜನೆ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ಯೋಜನೆಯಾಗಿ ರಾಜ್ಯದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಶಕ್ತಿ ತುಂಬುತ್ತಿದೆ. ಇಂತಹ ಅಪಪ್ರಚಾರಗಳಿಂದ ಬಿಜೆಪಿ ಮುಖಭಂಗ ಅನುಭವಿಸುತ್ತದೆಯೇ ಹೊರತು ಸಾಧನೆ ಮಾಡಲಾಗದು ಎಂದು ಟೀಕಿಸಿದೆ.
ಉಚಿತ ಪ್ರಯಾಣದಿಂದ ಸಾರಿಗೆ ನಿಗಮಗಳು ದಿವಾಳಿಯಾಗುತ್ತವೆ ಎಂದಿತ್ತು. ಆದರೆ ನಿಗಮಗಳಿಗೆ ಹೆಚ್ಚು ಆದಾಯ ಹರಿದು ಬಂದಿದೆ. ಶಕ್ತಿ ಯೋಜನೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಹೆಚ್ಚಿಸಿ ಸಾರಿಗೆ ನಿಗಮಗಳಿಗೆ ಹಾಗೂ ಮಹಿಳೆಯರಿಗೆ ಇನ್ನಷ್ಟು ಶಕ್ತಿ ತುಂಬುತ್ತೇವೆ. ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಶಕ್ತಿ ಬಂದಿದೆ. ದೇವಾಲಯಗಳ ಆದಾಯಕ್ಕೆ ಶಕ್ತಿ ಬಂದಿದೆ. ಇಂತಹ ಯೋಜನೆ ನಿಲ್ಲಲಿದೆ ಎನ್ನುವ ಬಿಜೆಪಿಯದ್ದು ನನಸಾಗದ ಕನಸು ಮಾತ್ರ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಶಕ್ತಿ ಯೋಜನೆಯ ಯಶಸ್ಸು ಬಿಜೆಪಿಯವರ ನಿದ್ದೆಗೆಡಿಸಿರುವುದರಲ್ಲಿ ಎರಡು ಮಾತಿಲ್ಲ. ಶಕ್ತಿ ಯೋಜನೆಗೆ ನಿಜವಾಗಲೂ ಶಕ್ತಿ ತುಂಬುತ್ತಿರುವ ಬಿಜೆಪಿಯವರಿಗೆ ಧನ್ಯವಾದಗಳು. ಶಕ್ತಿ ಯೋಜನೆ ಇನ್ನೊಂದು ತಿಂಗಳಿಗೆ ನಿಲ್ಲಲಿದೆ ಎಂದು ಬಿಜೆಪಿಯವರು ಬಡಬಡಾಯಿಸುತ್ತಿದ್ದಾರೆ. ಶಕ್ತಿ ಯೋಜನೆ ಅನುಷ್ಠಾನವೇ ಆಗುವುದಿಲ್ಲ. ಸಾರಿಗೆ ಸಂಸ್ಥೆಗಳು ದಿವಾಳಿಯಾಗಲಿವೆ ಎಂದು ಬೊಬ್ಬೆ ಹೊಡೆಯುತ್ತಿದ್ದವರು ಇಂದು ಈಗಾಗಲೇ ರೂ. 2000 ಕೋಟಿ ವೆಚ್ಚವಾಗಿದೆ, ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಖಾಲಿಯಾಗುತ್ತಿದೆ ಎನ್ನುತ್ತಿದ್ದಾರೆ. ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣವನ್ನು ಹೆಚ್ಚಿಸಿ ಸಾರಿಗೆ ಸಂಸ್ಥೆಗಳಿಗೆ ಹಣ ನೀಡುವ ಸಾಮರ್ಥ್ಯ ಸರ್ಕಾರಕ್ಕಿದೆ ಎಂದು ತಿಳಿಸಿದೆ.