ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಚೇತರಿಕೆ ಕಾಣುವುದಿಲ್ಲ. ಹೀಗಾಗಿ ಆ ಪಕ್ಷದ ಹೈಕಮಾಂಡ್ ಇನ್ನೂ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಅದು ಮುಳುಗುತ್ತಿರುವ ಹಡಗು ಅಲ್ಲ. ಈಗಾಗಲೇ ಮುಳುಗಿ ಹೋಗಿರುವ ಹಡಗು. ಹೀಗಾಗಿ ಈ ಪಕ್ಷಕ್ಕೆ ಕರ್ನಾಟಕದಲ್ಲಿ ಭವಿಷ್ಯವಿಲ್ಲ. ಈ ಹಿಂದೆ ಚೈತ್ರಾ ಕುಂದಾಪುರ ಮತ್ತು ಇತರರು ಟಿಕೆಟ್ ಕೊಡಿಸುವುದಾಗಿ ಮೋಸ ಮಾಡಿರುವ ಪ್ರಕರಣ ಎಲ್ಲರಿಗೂ ಗೊತ್ತಿದೆ. 40 ಪರ್ಸೆಂಟ್ ಕಮಿಷನ್ ಸರಕಾರವನ್ನು ನಾವು ನೋಡಿದ್ದೇವೆ. ಇಂದಿಗೂ ಕೂಡ ಆ ಪಕ್ಷಕ್ಕೆ ಓರ್ವ ಪ್ರತಿಪಕ್ಷದ ನಾಯಕನನ್ನು ನೇಮಕ ಮಾಡಲು ಆಗಿಲ್ಲ.
ಬಹುಷಃ ನರೇಂದ್ರ ಮೋದಿ ಮತ್ತು ಅಮೀತ ಶಾ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿರುವುದರಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಕರ್ನಾಟಕ ಬಿಜೆಪಿ ನಾಯಕರ ಮೇಲಿನ ಸಿಟ್ಟಿನಿಂದಾಗಿ ಪ್ರತಿಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷನ ನೇಮಕ ಮಾಡಿಲ್ಲ. ನಮ್ಮ ರಾಜ್ಯದಲ್ಲಿ ಬಿಜೆಪಿ ಮುಗಿದು ಹೋದ ಕಥೆ. ರಾಜ್ಯದಲ್ಲಿ ತಲೆ ಎತ್ತಿ ಮೇಲೆ ಏಳಲಾರದ ಸ್ಥಿತಿಯಲ್ಲಿ ಬಿಜೆಪಿ ಇದೆ ಎಂದರು.