ಬಾಗಲಕೋಟೆ : ಈ ದೇಶದಲ್ಲಿ ಕೆಲವರಿಂದ ಕಿಡಿಗೇಡಿತನ ಕೆಲಸಗಳು ನಡೆಯುತ್ತಿವೆ. ಚುನಾವಣೆ ಬಂದಾಗ ಕೋಮು ಗಲಭೆ, ಜಾತಿ ಗಲಭೆ ಎಬ್ಬಿಸಿ ಆ ಮೂಲಕ ಲಾಭ ಪಡೆಯಲು ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ನಿನ್ನೆ ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಬ್ಯಾನರ್ಗಳಿಗೆ ಕಲ್ಲೆಸೆತದ ಘಟನೆ ಪ್ರಸ್ತಾಪಿಸಿ ಮಾತನಾಡಿದರು.
ಸಂವಿಧಾನ ವಿರೋಧಿ ನಡವಳಿಕೆಗಳು ನಡೆಯುತ್ತಿವೆ. ಬಿಜೆಪಿಗರಿಗೆ ಹನುಮ ಬೇಕಾಗಿಲ್ಲ, ರಾಮನೂ ಬೇಕಾಗಿಲ್ಲ. ಅವರಿಗೆ ಮತ ಬೇಕಾಗಿದೆ. ಆ ಮತಗಳ ಲಾಲಸೆ, ಆಸೆಗೆ ಹೀನ ಕೃತ್ಯಕ್ಕೆ ಇಳಿಯುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಹನುಮಧ್ವಜ ವಿಚಾರ ಇಟ್ಟುಕೊಂಡು ಮೈಸೂರು ಭಾಗದಲ್ಲಿ ಬಿಜೆಪಿ ಗಟ್ಟಿ ನೆಲೆಯೂರಲು ಪ್ರಯತ್ನ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲೆಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲ ಹೀಗೆ ಮಾಡುತ್ತಾರೆ. ಎಲೆಕ್ಷನ್ ಮುಗಿಯುವವರೆಗೂ ಬಿಜೆಪಿ ಕೆಲಸವೇ ಇದು. ಯಾವತ್ತಾದರೂ ಅವರು ಅಭಿವೃದ್ಧಿ ಕೆಲಸಗಳನ್ನು ಹೇಳಿದ್ದಾರಾ? ಅಧಿಕಾರ ಪಡೆಯೋಕೆ ಹಿಂದುಗಳು ಅನ್ನೋದು, ಎಲೆಕ್ಷನ್ ಮುಗಿದ ಮೇಲೆ ಮತದಾರ ಎಲ್ಲಿದ್ದಾನೋ ಅಲ್ಲೇ ಇರುತ್ತಾನೆ ಎಂದು ಸಚಿವರು ಟೀಕಿಸಿದರು.