ದಾವಣಗೆರೆ: ನಿಮ್ಮ ದುರಹಂಕಾರದ ಮಾತುಗಳಿಂದಲೇ ಹಲವರು ಬಿಜೆಪಿ ಬಿಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಮಾಜಿ ಸಚಿವರು, ” ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ. ನಾನು ಪಕ್ಷ ಕಟ್ಟಿ, ಹೋರಾಟ ಮಾಡಿ ಜೈಲಿಗೆ ಹೋಗಿ ಬಂದಿದ್ದೇನೆ.
ಬಿಜೆಪಿಗೆ ಹಾಲಿ ಜಿಲ್ಲಾಧ್ಯಕ್ಷನ ಕೊಡುಗೆ ಏನು, ಆತ ಕೇಂದ್ರ ಸರ್ಕಾರದ ಕರಪತ್ರಗಳನ್ನ ಹಂಚಿದ್ದಾನಾ? ಚುನಾವಣೆಯಲ್ಲಿ ಯಾವ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಚಾರ ಮಾಡಿದ್ದಾನೆ ? ” ಎಂದು ಪ್ರಶ್ನಿಸಿದ್ದಾರೆ. ಜಿಲ್ಲಾ ಬಿಜೆಪಿಯಲ್ಲಿ ಇಂತವರ ದೌರ್ಜನ್ಯದಿಂದ ನೂರಾರು ಮುಖಂಡರು ಪಾರ್ಟಿ ಬಿಡುತ್ತಿದ್ದಾರೆ. ನನ್ನ ಬಗ್ಗೆ ಮಾತನಾಡಿದರೆ ಹುಷಾರ್! ಎಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
” ಬಿಜೆಪಿ ಪಕ್ಷವೆಂದರೆ ನನಗೆ ತಾಯಿ ಸಮಾನ, ಪಕ್ಷ ನನಗೆ ಯಾವುದೇ ದ್ರೋಹ ಮಾಡಿಲ್ಲ. ಕೆಲವರು ದೌರ್ಬಲ್ಯಗಳ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ಅವರು ಏನು ಬೇಕಾದರೂ ಮಾತನಾಡಲಿ ” ಎಂದರು. ” ಕಾಂಗ್ರೆಸ್ನಿಂದ ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಮಾತನಾಡಿ, ನಾನು ಅಷ್ಟು ಪವರ್ ಫುಲ್ ಲೀಡರ್ ಅಲ್ಲ, ನಾನು ಸಾಮಾನ್ಯ ಕಾರ್ಯಕರ್ತ, ಅಧಿಕಾರದಲ್ಲಿರುವ ಕಾಂಗ್ರೆಸ್ನವರು ನನಗೆ ಹೇಗೆ ಟಿಕೆಟ್ ಕೊಡ್ತಾರೆ? ” ಎಂದು ಪ್ರಶ್ನೆ ಮಾಡಿದರು.