ಬಾಗಲಕೋಟೆ: INDIA ಸಂಘಟನೆಯಿಂದ ರಾಜ್ಯದಲ್ಲಿ ಬಿಜೆಪಿ (BJP) ಹೆದರಿದೆ, ಎರಡು ಮಾತಿಲ್ಲ. ನಾನು ಸಹ ಮೊದಮೊದಲು ಮೋದಿಯವರನ್ನು (Narendra Modi) ಅಭಿಮಾನಿಸುತ್ತಿದ್ದೆ. ಇಂದು ಮೋದಿಯವರು ಕೆಳಗಿಳಿಯುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H.Vishwanath) ತಮ್ಮ ಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದಾರೆ.
INDIA ಸಂಘಟನೆಯಿಂದ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ (JDS) ಮೈತ್ರಿ ಆಯ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಬಾಗಲಕೋಟೆಯಲ್ಲಿ (Bagalkote) ಅವರು ಪ್ರತಿಕ್ರಿಯಿಸಿದರು. ಬಿಜೆಪಿಯವರು ಎಲ್ಲಿಯಾದರೂ ಈ ದೇಶದ ಜನರ ಅಕ್ಷರ, ಆರೋಗ್ಯ, ಅನ್ನ, ನಮ್ಮ ಉದ್ಯೋಗದ ಬಗ್ಗೆ ಏನಾದರೂ ಮಾತನಾಡಿದ್ದಾರಾ? ಏನೂ ಮಾತನಾಡುತ್ತಿಲ್ಲ.
ಬಿಜೆಪಿಯವರು ಭೂತ ಕಾಲದಲ್ಲಿದ್ದಾರೆ ಎಂದು ಬಿಜೆಪಿ ಪಕ್ಷವನ್ನು ಲೇವಡಿ ಮಾಡಿದರು. 1,200 ವರ್ಷಗಳ ಹಿಂದೆ ಇಲ್ಲಿ ರಾಮ ಇದ್ದ ಎನ್ನುವುದು ಯಾರಿಗೆ ಬೇಕು? ರಾಮ ಬೇಕು ನಿಜ. ಆದರೆ ಭೂತಕಾಲದ ಚರ್ಚೆ ಬಿಟ್ಟು ವರ್ತಮಾನಕ್ಕೆ ಬನ್ನಿ. ವರ್ತಮಾನಕ್ಕೆ ಬಂದು ಚರ್ಚೆ ಮಾಡಿ ಭವಿಷ್ಯವನ್ನು ಕಟ್ಟುವುದಾಗಬೇಕೆ ಹೊರತು, ಬರೀ ನೀವು ಭೂತಕಾಲದಲ್ಲೇ ಓಡಾಡುತ್ತಿದ್ದರೆ ಏನಾಗುತ್ತದೆ ಎಂದು ಪ್ರಶ್ನಿಸಿದರು.