ನವದೆಹಲಿ: 2018ರ ಚುನಾವಣೆಯ ನಂತರ ರಾಜ್ಯದಲ್ಲಿನ ಬಿಜೆಪಿ (BJP)ನೇತೃತ್ವದ ಸರ್ಕಾರವು ‘ಮೋಸ, ಕುದುರೆ ವ್ಯಾಪಾರ ಮತ್ತು ಹಣದ ಬಲ’ದಿಂದ ಹುಟ್ಟಿಕೊಂಡಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ,(Chidambaram) ಕರ್ನಾಟಕ ಚುನಾವಣಾ ಪ್ರಚಾರ ದಲ್ಲಿ ಸ್ಥಿರ ಸರ್ಕಾರದ ಕುರಿತು ಹೇಳಿಕೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ತಮ್ಮ ಪ್ರಚಾರ ಭಾಷಣಗಳಲ್ಲಿ, ಪ್ರಧಾನಿ ಮೋದಿ ಅವರು ತ್ವರಿತಗತಿಯ ಸರ್ವತೋಮುಖ ಅಭಿವೃದ್ಧಿಗೆ,
ಪೂರ್ಣ ಬಹುಮತದೊಂದಿಗೆ ಪ್ರಬಲ ಮತ್ತು ಸ್ಥಿರವಾದ ಬಿಜೆಪಿ ಸರ್ಕಾರ ಮುಖ್ಯ ಎಂದು ಪ್ರತಿಪಾದಿಸುತ್ತಿದ್ದಾರೆ. ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಚಿದಂಬರಂ, ‘ಕರ್ನಾಟಕದಲ್ಲಿ ಸ್ಥಿರ ಸರ್ಕಾರಗಳನ್ನು ನೀಡಲು ಬಿಜೆಪಿಗೆ ಮತ ನೀಡುವಂತೆ ಗೌರವಾನ್ವಿತ ಪ್ರಧಾನಿ ಮನವಿ ಮಾಡಿದ್ದಾರೆ. ಆದರೆ, ಕರ್ನಾಟಕ ರಾಜ್ಯ ವಿಧಾನಸಭೆಗೆ 2018ರ ಸಾರ್ವತ್ರಿಕ ಚುನಾವಣೆಯ ನಂತರ, ರಾಜ್ಯವು ನಾಲ್ಕು ಸರ್ಕಾರಗಳಿಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.