ಪಾಟ್ನಾ: ಜಾತಿ ಆಧಾರಿತ ಸಮೀಕ್ಷೆ ನಡೆಸುತ್ತಿದ್ದ ಬಿಹಾರ ಸರ್ಕಾರ ಸೋಮವಾರ ಅಂತಿಮ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಸಮೀಕ್ಷೆಯ ವರದಿಯ ಪ್ರಕಾರ, ಒಟ್ಟು 13,07,25,310 ಜನಸಂಖ್ಯೆ ಇದ್ದು, ಇತರ ಹಿಂದುಳಿದ ವರ್ಗ (OBC) ಮತ್ತು ಅತ್ಯಂತ ಹಿಂದುಳಿದ ವರ್ಗಗಳ (EBC) ವರ್ಗದಲ್ಲಿ 63 ಪ್ರತಿಶತದಷ್ಟು ಜನರನ್ನು ಹೊಂದಿದೆ.ಸರ್ಕಾರದ ಮಾಹಿತಿ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ 6,41,31,992 ಪುರುಷರು, 6,11,38,460 ಮಹಿಳೆಯರು, 2,836 ತೃತಿಯ ಲಿಂಗಿಗಳಿದ್ದಾರೆ. ಇದರಲ್ಲಿ 19ರಷ್ಟು ಜನರನ್ನು ಪರಿಶಿಷ್ಟ ಜಾತಿ, 1.68% ಪರಿಶಿಷ್ಟ ಪಂಗಂಡ, 27.12% ಒಬಿಸಿ, 36.01% ಇಬಿಸಿ, 15.52% ಮೀಸಲಾತಿ ವ್ಯಾಪ್ತಿಗೆ ಬಾರದ ಜನರಿದ್ದಾರೆ. ಈ ಸಮೀಕ್ಷೆಗೆ ಸರ್ಕಾರ 500 ಕೋಟಿ.ರೂ ಖರ್ಚು ಮಾಡಿದೆ.
ಸಮೀಕ್ಷೆ ನಡೆಸಿದ ತಂಡಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿನಂದಿಸಿದರು. ಇಂದು ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಬಿಹಾರದಲ್ಲಿ ನಡೆಸಿದ ಜಾತಿ ಆಧಾರಿತ ಜನಗಣತಿಯ ಡೇಟಾವನ್ನು ಪ್ರಕಟಿಸಲಾಗಿದೆ. ಜಾತಿವಾರು ಗಣತಿ ಕಾರ್ಯದಲ್ಲಿ ತೊಡಗಿರುವ ಇಡೀ ತಂಡಕ್ಕೆ ಅಭಿನಂದನೆಗಳು. ಜಾತಿವಾರು ಲೆಕ್ಕಾಚಾರದ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.