ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಭೂಮಿ ನೀಡುವ ಹರಗಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳಾದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ, ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಮತ್ತು ಸಂಸದೆ ಮೀಸಾ ಭಾರತಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ನೀಡಿದೆ.ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಅವರು ಆದೇಶ ಹೊರಡಿಸಿದ್ದಾರೆ. ಜುಲೈ 3 ರಂದು ಸಿಬಿಐ ಹೊಸ ಚಾರ್ಜ್ಶೀಟ್ ಸಲ್ಲಿಸಿದ ಬಳಿಕ ನ್ಯಾಯಾಲಯವು ಸೆಪ್ಟೆಂಬರ್ 22 ರಂದು ತೇಜಸ್ವಿ ಯಾದವ್, ಲಾಲು ಯಾದವ್, ರಾಬ್ರಿ ದೇವಿ ಮತ್ತು ಇತರ 14 ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು.
ಲಾಲು ಪ್ರಸಾದ್ ಅವರು 2004 ರಿಂದ 2009 ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ರೈಲ್ವೆಯಲ್ಲಿ ನೇಮಕಾತಿಗಳನ್ನು ಮಾಡಲು ಬದಲಿಯಾಗಿ ಅವರ ಕುಟುಂಬಕ್ಕೆ ಆಕಾಂಕ್ಷಿಗಳು ಭೂಮಿ ನೀಡಿದ್ದರು ಎಂದು ಆರೋಪಿಸಲಾಗಿದೆ. ಕೇಂದ್ರೀಯ ತನಿಖಾ ದಳ (CBI) ರೈಲ್ವೆಯಲ್ಲಿ ಮಾಡಿದ ನೇಮಕಾತಿಗಳು ಭಾರತೀಯ ರೈಲ್ವೆ ಸ್ಥಾಪಿಸಿದ ಮಾನದಂಡಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿಕೊಂಡಿದೆ.