ದಾವಣಗೆರೆ: ಇ-ಸ್ವತ್ತು ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಪಿಡಿಒ ಹಾಗೂ ಡಾಟಾ ಎಂಟ್ರಿ ಆಪರೇಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ಗ್ರಾಪಂಯಲ್ಲಿ ಈ ಘಟನೆ ನಡೆದಿದೆ. ಕೆಚ್ಚೇನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಒ ನಂದಿ ಅಂಗೇಶ ಸಾರಂಗಮಠ ಹಾಗೂ ಡಾಟಾ ಎಂಟ್ರಿ ಆಪರೇಟರ್ ಅಜ್ಜಯ್ಯ ಆರ್. ಎಂಬಿಬ್ಬರು ಭ್ರಷ್ಟ ಬಂಧಿತ ಅಧಿಕಾರಿಗಳಾಗಿದ್ದಾರೆ. ಬಸವನಗೌಡ ಎಂಬವರು ಜಿಲ್ಲೆಯ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದಲ್ಲಿರುವ ಮನೆ ಖಾತೆ ನಂ. 23ಕ್ಕೆ ಇ-ಸ್ವತ್ತು ಮಾಡಿಕೊಡಲು ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.
ಇ-ಸ್ವತ್ತು ಮಾಡಿಕೊಡಲು ಪಿಡಿಒ 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅರ್ಜಿದಾರರು ಅ. 21ರಂದು ಲೋಕಾಯುಕ್ತ ಪೊಲೀಸ್ ಠಾಣೆ ದೂರು ನೀಡಿದ್ದರು. ದೂರು ಪಡೆದ ಲೋಕಾಯುಕ್ತ ಅಧಿಕಾರಿಗಳು ಇಂದು ಬಸವನಗೌಡ ಅವರಿಂದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಲಂಚ ಪಡೆಯುವಾಗ ಟ್ರ್ಯಾಪ್ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಪುರೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.