ನವದೆಹಲಿ: ದೇಶದ ಹೆಸರನ್ನು ಭಾರತ ಎಂದು ಬದಲಿಸುವ ಕುರಿತಾಗಿ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಹೊರ ಬಿದ್ದ ಬೆನ್ನಲ್ಲೇ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ವಿರೋಧ ಪಕ್ಷಗಳ ಮೈತ್ರಿ ಕೂಟದ ಹೆಸರು INDIA ಎಂದೇ ಇರುವ ಹಿನ್ನೆಲೆಯಲ್ಲಿ ದೇಶದ ಹೆಸರನ್ನು ಇಂಡಿಯಾ ಬದಲಾಗಿ ಭಾರತ ಎಂದು ಬದಲಾಯಿಸಿದರೆ, ಆಗಬಹುದಾದ ಲಾಭ ನಷ್ಟಗಳ ಲೆಕ್ಕಾಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್, ವಿರೋಧ ಪಕ್ಷಗಳ ಮೈತ್ರಿ ಕೂಟದ ಹೆಸರನ್ನು BHARAT ಎಂದೇ ಬದಲಾವಣೆ ಮಾಡಿ ಎಂದು ಸಲಹೆ ನೀಡಿದ್ಧಾರೆ.
Alliance for Betterment, Harmony And Responsible Advancement for Tomorrow ಎಂಬ ಹೆಸರಿನ ಸಂಕ್ಷಿಪ್ತ ರೂಪ BHARAT ಎಂದಾಗುತ್ತದೆ. ಕನ್ನಡದಲ್ಲಿ ಹೇಳೋದಾದ್ರೆ, ನಾಳೆಗಾಗಿ ಉತ್ತಮ, ಸಾಮರಸ್ಯ ಮತ್ತು ಜವಾಬ್ದಾರಿಯುತ ಪ್ರಗತಿಗಾಗಿ ಮೈತ್ರಿ ಕೂಟ ಎಂಬ ಅರ್ಥ ಬರುತ್ತದೆ. ಹೀಗಾಗಿ, ವಿರೋಧ ಪಕ್ಷಗಳ ಒಕ್ಕೂಟಕ್ಕೆ BHARAT ಮೈತ್ರಿ ಕೂಟ ಎಂಬ ಹೆಸರು ಅರ್ಥಗರ್ಭಿತ ಆಗಲಿದೆ ಎಂದು ಶಶಿ ತರೂರ್ ಸಲಹೆ ನೀಡಿದ್ಧಾರೆ. ಅಷ್ಟೇ ಅಲ್ಲ, ಈ ರೀತಿ ಮೈತ್ರಿ ಕೂಟದ ಹೆಸರು ಬದಲಾವಣೆ ಮಾಡುವುದರಿಂದ ‘ದೇಶದ ಹೆಸರು ಬದಲಿಸುವ ಆಟ’ ಕೊನೆಗೊಳ್ಳುತ್ತದೆ ಎಂದೂ ಶಶಿ ತರೂರ್ ಹೇಳಿದ್ದಾರೆ.