ರಾಮನಗರ: “ಭಾರತ ಜೋಡೊ ಪಾದಯಾತ್ರೆಯ ಶ್ರಮ ಕರ್ನಾಟಕದಲ್ಲಿ ಫಲ ನೀಡಿತು. ಸುಮಾರು 500 ಕಿಲೋ ಮೀಟರ್ ಪಾದಯಾತ್ರೆ ಕರ್ನಾಟಕದಲ್ಲಿ ಸಾಗಿದ ಪರಿಣಾಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ರಾಮನಗರದಲ್ಲಿ ನಡೆದ ಪಾದಯಾತ್ರೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವ̧ರು, “ದೇಶದ ಸಮಗ್ರತೆ, ಐಕ್ಯತೆ, ಶಾಂತಿ ಕಾಪಾಡಲು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಪಾದಯಾತ್ರೆ ಮಾಡಿದ ಪರಿಣಾಮ ಇಂದು ನಾವು ದೇಶದಲ್ಲಿ ಬದಲಾವಣೆ ಕಾಣುತ್ತಿದ್ದೇವೆ ಎಂದರು.
ಇನ್ನೂ ಕಾಂಗ್ರೆಸ್ ಪಕ್ಷ ಈ ದೇಶದ ಶಕ್ತಿ, ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರು ಅಧಿಕಾರಕ್ಕೆ ಬಂದಂತೆ. ಅಧಿಕಾರಕ್ಕೆ ಬಂದ ತಕ್ಷಣ ಆರ್ಥಿಕವಾಗಿ ನಮ್ಮ ಜನರನ್ನು ಸದೃಡ ಮಾಡುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಇದು ನಿಜವಾದ ಬದಲಾವಣೆಯಾಗಿದೆ. ತುರುವೇಕೆರೆ ಹೊರತು ಪಡಿಸಿ ಭಾರತ ಜೋಡೊ ಯಾತ್ರೆ ಹೆಜ್ಜೆ ಹಾಕಿದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಭಾರತ ಜೋಡೊ ಯಾತ್ರೆಗೂ ಮುಂಚಿತವಾಗಿ ಮೇಕೆದಾಟು ಪಾದಯಾತ್ರೆ ಮಾಡಿದೆವು ಬೆಂಗಳೂರಿನ ಪದ್ಮನಾಭನಗರ ಹೊರತು ಪಡಿಸಿ ಕನಕಪುರ, ರಾಮನಗರ, ಮಾಗಡಿ, ಸೇರಿದಂತೆ ಈ ಪಾದಯಾತ್ರೆ ಹೆಜ್ಜೆ ಹಾಕಿದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. .