ಬೆಂಗಳೂರು;- DCM ಡಿಕೆ ಶಿವಕುಮಾರ್ ಗೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಡಿಸಿಎಂಗೆ ಪತ್ರ ಬರೆದು ಮಾಜಿ ಸಚಿವ ಸುರೇಶ್ ಕುಮಾರ್ ಒತ್ತಾಯಿಸಿದ್ದಾರ. ಮಳೆ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಲಿದ್ದು, ಈಗಾಗಲೇ ನೀರಿನ ಕೊರತೆ ನೀಗಿಸಲು ಕೈಗೊಳ್ಳಬಹುದಾದ ಕ್ರಮಗಳ ನೀಲನಕ್ಷೆ ಸಿದ್ಧಪಡಿಸಿಕೊಳ್ಳಬೇಕೆಂದು ಎಂದು ಮನವಿ ಮಾಡಿದ್ದಾರೆ.
ಹಿಂದೆಲ್ಲ ಮಾಡಿದಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಎಲ್ಲಾ ಖಾಸಗಿ ಟ್ಯಾಂಕರ್ಗಳನ್ನು ಸರ್ಕಾರವೇ ತೆಗೆದುಕೊಳ್ಳಬೇಕು. ವಾಣಿಜ್ಯ ಉದ್ದೇಶಗಳಿಗಾಗಿ ಉಪಯೋಗಿಸುತ್ತಿರುವ ಖಾಸಗಿ ಬೋರ್ವೆಲ್ಗಳನ್ನು ಬೆಂಗಳೂರು ನಾಗರಿಕರ ಉಪಯೋಗಕ್ಕಾಗಿ ಸರ್ಕಾರ ಮುಂದಿನ 9 ತಿಂಗಳ ಮಟ್ಟಿಗೆ ವಶಪಡಿಸಿಕೊಳ್ಳಬೇಕು.
ಸೋಮವಾರ ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿರುವುದು ಅತ್ಯಂತ ವಿಷಾದನೀಯ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 2,600 ಕ್ಯೂಸೆಕ್ ನೀರು ಹರಿಸುವಂತೆ ನಿಯಂತ್ರಣ ಸಮಿತಿ ರಾಜ್ಯಕ್ಕೆ ಸೂಚನೆ ನೀಡಿ, ಮತ್ತೊಂದು ದೊಡ್ಡ ಶಾಕ್ ನೀಡಿದೆ. ರಾಜ್ಯದಲ್ಲಿ ಮುಂಗಾರು ತೀವ್ರವಾಗಿ ಕೈಕೊಟ್ಟ ಕಾರಣ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿರುವ ಜಲಾಶಯಗಳಲ್ಲಿ ಕಳೆದ ವರ್ಷದ ಮಟ್ಟಕ್ಕಿಂತ ಶೇ 50ರಷ್ಟು ನೀರಿನ ಮಟ್ಟ ಕಡಿಮೆ ಇದೆ. ಹೀಗಿರುವಾಗ ನಿಯಂತ್ರಣ ಸಮಿತಿಯ ಈ ಆದೇಶ ಕುಡಿಯುವ ನೀರಿನ ಸರಬರಾಜಿಗೆ ವಿಶೇಷವಾಗಿ ಬೆಂಗಳೂರು ನಗರದ ನಾಗರಿಕರಿಗೆ ದೊಡ್ಡ ಆತಂಕ ತಂದೊಡ್ಡಿದೆ. ಈ ಸಮಯದಲ್ಲಿ ರಾಜ್ಯ ಸರ್ಕಾರ ತುರ್ತು ಕಾರ್ಯಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.