ಬೆಂಗಳೂರು: ಅಕ್ರಮ ವಲಸೆ ಅನುಮಾನದಡಿ 301 ದಿನ ಸೆರೆವಾಸ ಅನುಭವಿಸಿದ ಪ.ಬಂಗಾಳದ ದಂಪತಿಗೆ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಜಾಮೀನು ದೊರೆತಿದ್ದು, ಅವರನ್ನು ತವರಿಗೆ ಕಳುಹಿಸಲಾಗಿದೆ. ಫಲಶ್ ಹಾಗೂ ಶುಕ್ಲಾ ಉದ್ಯೋಗ ಅರಸಿ ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಬೆಂಗಳೂರಿಗೆ ಬಂದಿದ್ದರು.
ಗರದಲ್ಲಿ ತ್ಯಾಜ್ಯ ವಿಂಗಡಣೆ ಕೆಲಸ ಮಾಡಿಕೊಂಡು ಮಾರತ್‌ಹಳ್ಳಿ ಭಾಗದಲ್ಲಿ ವಾಸವಿದ್ದರು. 2022 ರ ಜುಲೈನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ದಂಪತಿಯನ್ನು ವಿದೇಶಿಗರ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು.
ದಂಪತಿ ‘ತಾವು ಪಶ್ಚಿಮ ಬಂಗಾಳದ ಜಮಾಲ್ಪುರ ಮೂಲದವರು’ ಎಂದು ವಿವರಿಸಲು ಯತ್ನಿಸಿದ್ದರಾದರೂ ಅವರ ಪ್ರಯತ್ನ ವಿಫಲವಾಗಿತ್ತು. ನಂತರ ಬಂಧಿತರು ಹೇಳಿದ್ದ ವಿಳಾಸಕ್ಕೆ ತೆರಳಿ ಪರಿಶೀಲಿಸಿದ್ದ ಬೆಂಗಳೂರು ಪೊಲೀಸರು ಜಮಾಲ್ಪುರದ ಬಿಡಿಓರನ್ನು ಸಂಪರ್ಕಿಸಿ ಬಂಧಿತರ ಸಂಬಂಧಿಕರನ್ನು ಭೇಟಿಯಾಗಿತ್ತು.
ಏಪ್ರಿಲ್ 28 ರಂದು ದಂಪತಿಗೆ ಜಾಮೀನು ಮಂಜೂರಾಗಿತ್ತು. ಆದರೆ ಸ್ಥಳೀಯ ವ್ಯಕ್ತಿಗಳ ಸಹಿಯ ಅಗತ್ಯವಿದ್ದುದರಿಂದ ಕೆಲಕಾಲ ಬಿಡುಗಡೆ ವಿಳಂಬವಾಗಿತ್ತು. ಸದ್ಯ ಎಲ್ಲ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದಂಪತಿಯನ್ನು ಗುರುವಾರ ಅವರ ಊರಿಗೆ ಕಳುಹಿಸಲಾಗಿದೆ.